ಬೆಂಗಳೂರು: ರೇಣುಕಾಸ್ವಾಮಿ ಕುಟುಂಬದ ಪರ ನಟಿ ರಮ್ಯಾ ನಿಂತಿರುವುದು ದರ್ಶನ್ ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದ್ದು, ಈ ವಿವಾದ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ.
ಈ ನಡುವೆ ದರ್ಶನ್ ಅಭಿಮಾನಿಗಳಿಗಾಗಿಯೇ ತೆರೆಯಲಾಗಿರುವ ಅಫಿಶಿಯಲ್ ಫ್ಯಾನ್ಸ್ ಪೇಜ್ ನಲ್ಲಿ ʻಡಿ ಬಾಸ್' ಮೇಲೆ ಅಭಿಮಾನ ಇರುವ ಯಾರೊಬ್ಬರೂ ಯಾವುದೇ ವಿವಾದಕ್ಕೂ ಕಿವಿಗೊಡದಂತೆ ಮನವಿ ಮಾಡಲಾಗಿದೆ.
ಡಿ ಬಾಸ್ ಮೇಲೆ ಗೌರವವಿರುವ ಯಾವೊಬ್ಬ ಅಭಿಮಾನಿ ಕೂಡ ಯಾವುದೇ ವಿವಾದಕ್ಕೆ ಕಿವಿಗೊಡಬೇಡಿ. ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ. ಯಾರಿಗೂ ಮೆಸೇಜ್ ಮಾಡಬೇಡಿ. ಪ್ರಚಾರಕ್ಕೆ ಆಗಲಿ, ಹುನ್ನಾರ ಮಾಡಲಿ, ಯಾರು ಏನೇ ಅಂದರೂ ತಲೆ ಕೆಡಸಿಕೊಳ್ಳಬೇಡಿ.
ದರ್ಶನ್ ಫ್ಯಾನ್ಸ್ ಏನೆಂದು, ಮಾಡಿರುವ ಸಮಾಜಮುಖಿ ಕಾರ್ಯಗಳು ಸಾಕ್ಷಿ. ಅವಮಾನಗಳು ಇನ್ನಷ್ಟು ಕೆಲಸ ಮಾಡಲು ಮೆಟ್ಟಿಲು ಆಗಲಿ ಎಂದು ಮನವಿ ಮಾಡಲಾಗಿದೆ.
ಈ ಹಿಂದೆ ನಟಿ ರಮ್ಯಾ ಅವರು, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂದು ನಾನು ನಂಬಿದ್ದೇನೆಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ ನಟ ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಅವರಿಗೆ ಕೆಟ್ಟದಾಗಿ ಕಾಮೆಂಟ್ಸ್ ಮಾಡಿದ್ದಾರೆ.
ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ ಬಗ್ಗೆ ಖುದ್ದು ರಮ್ಯಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋಸ್ ಶೇರ್ ಮಾಡಿಕೊಂಡಿದ್ದರು. ಇದೀಗ ದರ್ಶನ್ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ಕಾನೂನಾತ್ಮಕವಾಗಿ ಪಾಠ ಕಲಿಸಲು ತೀರ್ಮಾನಿಸಿದ್ದಾರೆ. ಅಶ್ಲೀಲವಾಗಿ ನಿಂದಿಸುತ್ತಿರುವವರ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಲು ನಟಿ ನಿರ್ಧರಿಸಿದ್ದಾರೆ.