ಬೆಂಗಳೂರು: ಕಲಾಸಿಪಾಳ್ಯದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಬಳಿ ಪತ್ತೆಯಾದ ಸ್ಫೋಟಕ ವಸ್ತುಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಹೇಳಿಕೆಯ ಪ್ರಕಾರ, ಪ್ರಕರಣದಲ್ಲಿ ಒಟ್ಟು 22 ಜೀವಂತ (R.E.X-90) ಜಿಲೆಟಿನ್ ಕಡ್ಡಿಗಳು ಮತ್ತು 30 ಜೀವಂತ ಡಿಟೊನೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜುಲೈ 23 ರಂದು ಬೆಳಿಗ್ಗೆ 9.30ರ ಸುಮಾರಿಗೆ ಕಲಾಸಿಪಾಳ್ಯದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸ್ಫೋಟಕ ವಸ್ತುಗಳನ್ನು ಇರಿಸಿರುವ ಬಗ್ಗೆ ಬಿಎಂಟಿಸಿ ಸಹಾಯಕ ಸಂಚಾರ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಂಬ್ ತಪಾಸಣೆ ದಳ ಮತ್ತು ಬಾಂಬ್ ನಿಷ್ಕ್ರೀಯ ದಳದೊಂದಿಗೆ ಬಂದು ತಪಾಸಣೆ ನಡೆಸಿದ ಕಲಾಸಿಪಾಳ್ಯ ಠಾಣೆಯ ಪೊಲೀಸರು, ಚೀಲದಲ್ಲಿದ್ದ ಆರು ಜಿಲೆಟಿನ್ ಕಡ್ಡಿಗಳು ಮತ್ತು 12 ಎಲೆಕ್ಟ್ರಿಕ್ ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡಿದ್ದರು.
ಪ್ರಕರಣದ ತನಿಖೆಗಾಗಿ ಐದು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಮಾಹಿತಿದಾರರು ಮತ್ತು ತಾಂತ್ರಿಕ ನೆರವಿನಿಂದ ತ್ವರಿತವಾಗಿ ಕಾರ್ಯನಿರ್ವಹಿಸಿದ ತಂಡವು ಜುಲೈ 28 ರಂದು ಈ ಪ್ರಕರಣಕ್ಕೆ ಸಂಬಂಧಿಸಿದ ಮೂವರು ವ್ಯಕ್ತಿಗಳನ್ನು ಬಂಧಿಸಿದರು.
ಈ ಕಾರ್ಯಾಚರಣೆಯನ್ನು ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಐಪಿಎಸ್ ಅವರ ಮೇಲ್ವಿಚಾರಣೆಯಲ್ಲಿ ಮತ್ತು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಎನ್ ಗಿರೀಶ್ ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಚಿಕ್ಕಪೇಟೆ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೆ.ಎಂ. ರಮೇಶ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಕಿರಣ್ ಕುಮಾರ್ ಎಸ್. ನೀಲಗರ್ ನೇತೃತ್ವದ ಕಲಾಸಿಪಾಳ್ಯ ಪೊಲೀಸ್ ಠಾಣೆ ತಂಡ ಮತ್ತು ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಶಂಕಿತರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು, ತನಿಖೆ ಮುಂದುವರೆದಿದೆ.