ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ಬಿ ದಯಾನಂದ್ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ರದ್ದು ಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ವಿರುದ್ಧ ತೀವ್ರವಾಗಿ ಕಿಡಿಕಾರಿದೆ.
ಆರ್‌ಸಿಬಿ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರವಿಲ್ಲ ಎಂದು ಮೊದಲ ದಿನದಿಂದಲೂ ಬಿಜೆಪಿ ಕರ್ನಾಟಕ ಪ್ರತಿಪಾದಿಸುತ್ತಿತ್ತು. ಈಗದು ಸತ್ಯ ಎಂಬುದು ಸಾಬೀತಾಗಿದೆ. 11 ಅಮಾಯಕ ಆರ್‌ಸಿಬಿ ಅಭಿಮಾನಿಗಳ ಸಾವಿನ ಪ್ರಕರಣದಲ್ಲಿ ಜವಾಬ್ದಾರಿಯಿಂದ ನುಣಿಚಿಕೊಂಡಿದ್ದ ಕಾಂಗ್ರೆಸ್ ಸರ್ಕಾರ ಅಂದು ಪೊಲೀಸ್ ಅಧಿಕಾರಿಗಳ ತಲೆಗೆ ಕಟ್ಟಿ ಜಾರಿಕೊಂಡಿತ್ತು. ಆದ್ರೀಗ ಪೊಲೀಸ್ ಅಧಿಕಾರಿಗಳ ಮೇಲಿನ ಅಮಾನತು ಶಿಕ್ಷೆ ರದ್ದು ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಪರೋಕ್ಷವಾಗಿ ತನ್ನ ತಪ್ಪು ಒಪ್ಪಿಕೊಂಡಿದೆ.
ಪ್ರಚಾರದ ಹಪಾಹಪಿಗೆ ಬಿದ್ದು, ಅಮಾಯಕ ಅಭಿಮಾನಿಗಳ ಸಾವಿಗೆ ಕಾರಣರಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.