ಸಾಮಾಜಿಕ ಮಾಧ್ಯಮಗಳಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ಅವಹೇಳನಕಾರಿ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ಪ್ರಮೋದ ಗೌಡ ಎಂಬ ವ್ಯಕ್ತಿ ಸೇರಿ ನಟ ದರ್ಶನ್ ಅವರ 43 ಅಭಿಮಾನಿಗಳ ವಿರುದ್ಧ ಬೆಂಗಳೂರು ಪೊಲೀಸರು ಸೋಮವಾರ ರಾತ್ರಿ ಎಫ್ಐಆರ್ ದಾಖಲಿಸಿದ್ದಾರೆ. ತಮ್ಮ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿದ ದರ್ಶನ್ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಈ ಮಧ್ಯೆ, ನಟ ದರ್ಶನ್ ಅಭಿಮಾನಿಗಳ ದುರ್ವರ್ತನೆ ವಿರುದ್ಧ ನಟಿ ರಮ್ಯಾ ದೂರು ನೀಡಿರುವುದಕ್ಕೆ ಶಿವರಾಜ್ ಕುಮಾರ್ ದಂಪತಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಶಿವರಾಜ್ ಕುಮಾರ್, ನಿಮ್ಮ ನಿಲವು ಸರಿಯಿದೆ, ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ’ ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ ಎಂದು ಹೇಳಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ-ದೂರುದಾರರು ಗುರುತಿಸಿದ ಸ್ಥಳಗಳಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಶವಗಳನ್ನು ಹೊರತೆಗೆಯುವ ಕಾರ್ಯವನ್ನು ಆರಂಭಿಸಿದೆ. ಸಮಾಧಿಯನ್ನು ಅಗೆಯುವ ಮುನ್ನ, ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಯಲ್ಲಿ ಡಿಐಜಿ ಎಂ ಎನ್ ಅನುಚೇತ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ದೂರುದಾರರು ಮೊದಲು ಗುರುತಿಸಿದ ನೇತ್ರಾವತಿ ಸ್ನಾನಘಟ್ಟದ ಪಕ್ಕದಲ್ಲಿನ ಸ್ಥಳಕ್ಕೆ ಕಾರ್ಮಿಕರನ್ನು ಕರೆದೊಯ್ಯಲಾಯಿತು. ಎಸ್‌ಐಟಿ ತನಿಖಾಧಿಕಾರಿಗಳು ಸಮಾಧಿಯನ್ನು ಅಗೆಯುವ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾರೆ. ವಿಶೇಷ ತನಿಖಾ ತಂಡ ಸೋಮವಾರ ಸಾಕ್ಷಿ-ದೂರುದಾರರನ್ನು ಸ್ಥಳಕ್ಕೆ ಕರೆದೊಯ್ದು ಶವಗಳನ್ನು ಹೂತಿರುವ ಅಥವಾ ದಹನ ಮಾಡಿದ್ದಾರೆ ಎಂದು ಹೇಳಿರುವ 13 ಸ್ಥಳಗಳನ್ನು ಗುರುತಿಸಿದೆ.
ಬೆಂಗಳೂರಿನಲ್ಲಿ ಬೀದಿನಾಯಿಗಳ ಹಿಂಡು 68 ವರ್ಷದ ವೃದ್ಧ ವ್ಯಕ್ತಿಯನ್ನು ಕಚ್ಚಿ ಕೊಂದು ಹಾಕಿದೆ. ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಟೆಲಿಕಾಮ್ ಲೇಔಟ್ ನಲ್ಲಿ ಈ ಘಟನೆ ವರದಿಯಾಗಿದ್ದು, ಬೀದಿನಾಯಿಗಳ ದಾಳಿಗೆ 68 ವರ್ಷದ ಸೀನಪ್ಪ ಎಂಬುವವರು ಸಾವನ್ನಪ್ಪಿದ್ದಾರೆ. ಸೀನಪ್ಪ ಅವರು ಸೋಮವಾರ ಬೆಳಗ್ಗೆ ವಾಕಿಂಗ್ಗೆ ಹೋಗುತ್ತಿದ್ದಾಗ 8 ರಿಂದ 9 ಬೀದಿನಾಯಿಗಳು ದಾಳಿ ಮಾಡಿದ್ದು, ಕೈ, ಕಾಲಿನ ಅರ್ಧ ಮಾಂಸ ಕಚ್ಚಿ ತಿಂದಿವೆ. ಅಷ್ಟೇ ಅಲ್ಲದೆ ಮುಖಕ್ಕೂ ಕಚ್ಚಿವೆ. ನಾಯಿಗಳ ದಾಳಿಗೆ ತೀವ್ರವಾಗಿ ಗಾಯಗೊಂಡ ವೃದ್ಧ ಸೀನಪ್ಪ ಅವರನ್ನು ಸ್ಥಳೀಯರು ಯಲಹಂಕದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ಅವರು ಆ ವೇಳೆಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಸೀನಪ್ಪ ಕುಟುಂಬಸ್ಥರಿಗೆ 1 ಲಕ್ಷ ರೂ. ಪರಿಹಾರ ಕೊಡುವುದಾಗಿ ಬಿಬಿಎಂಪಿ ಮಾಹಿತಿ ನೀಡಿದೆ.
ಕಾಂಗ್ರೆಸ್ ಪಕ್ಷದ ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಇಂದಿನಿಂದ ಸರಣಿ ಸಭೆಗಳನ್ನು ನಡೆಸಲಿದ್ದು, ಒಟ್ಟು ನಾಲ್ಕು ದಿನಗಳ ಕಾಲ ಜಿಲ್ಲಾವಾರು ಸಭೆ ನಡೆಯಲಿದೆ. ಆದರೆ ಈ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಆಹ್ವಾನ ಇಲ್ಲದಿರುವುದು ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಡಿಕೆ ಶಿವಕುಮಾರ್ ಅವರನ್ನು ಬದಿಗಿಟ್ಟು ಸಿದ್ದರಾಮಯ್ಯ ಶಾಸಕರ ಜತೆ ಜಿಲ್ಲಾವಾರು ಸಭೆ ನಡೆಸಲು ಮುಂದಾಗಿದ್ದು ಕೇವಲ ಸಿಎಂ ಮಾತ್ರ ಪ್ರತ್ಯೇಕವಾಗಿ ಶಾಸಕರ ಸಮಸ್ಯೆ, ಅಹವಾಲು ಆಲಿಸಲಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಶಾಸಕರ ಸಭೆ ನಡೆಸುವುದು ಸಿಎಂ ಅಧಿಕಾರವಾಗಿದೆ. ಅವರು ಅದನ್ನು ಪ್ರಯೋಗಿಸುತ್ತಿದ್ದಾರೆ, ಅದರಲ್ಲಿ ತಪ್ಪೇನಿದೆ ಇದರಲ್ಲಿ ತಪ್ಪೇನು ಇಲ್ಲ. ಈ ಬಗ್ಗೆ ನನಗೆ ಯಾವುದೇ ಆಕ್ಷೇಪ ಇಲ್ಲ. ಮಾಧ್ಯಮಗಳಿಗೇಕೆ ಕಷ್ಟವಾಗುತ್ತಿದೆ" ಎಂದು ಮರುಪ್ರಶ್ನಿಸಿದ್ದಾರೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪ ಹೊತ್ತಿರುವ ಐವರು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಹಾಸನ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಬೆಂಗಳೂರಿನಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಹಾಸನದಲ್ಲಿ ಎನ್ಎಚ್ಎಐ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಜಯಣ್ಣ ಆರ್, ಚಿಕ್ಕಬಳ್ಳಾಪುರದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜೂನಿಯರ್ ಇಂಜಿನಿಯರ್ ಆಂಜನೇಯ ಮೂರ್ತಿ ಎಂ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಬಿಬಿಎಂಪಿ ದಾಸರಹಳ್ಳಿ ಉಪವಿಭಾಗದ ಕಂದಾಯ ಅಧಿಕಾರಿ ಎನ್ ವೆಂಕಟೇಶ್ ಮತ್ತು ಬೆಂಗಳೂರಿನ ಬಿಡಿಎ ಕೇಂದ್ರ ಕಚೇರಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಕೆ ಓಂ ಪ್ರಕಾಶ್ ಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.