ಮಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ (NCAP) ಅಡಿಯಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಬೆಂಗಳೂರು, ದಾವಣಗೆರೆ ಮತ್ತು ಹುಬ್ಬಳ್ಳಿ-ಧಾರವಾಡ ಸಾಧಾರಣ ಪ್ರಗತಿ ಸಾಧಿಸಿವೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC) ತಿಳಿಸಿದೆ.
ಸಂಸತ್ತಿನ ಅಧಿವೇಶನದಲ್ಲಿ ಈ ಸಂಬಂಧ ಸಚಿವಾಲಯ ಪ್ರತಿಕ್ರಿಯೆ ನೀಡಿದೆ. ಕರ್ನಾಟಕವು ಉತ್ತಮ ಪ್ರಮಾಣದ ಹಣವನ್ನು ಪಡೆದುಕೊಂಡಿದೆ ಮತ್ತು ಇದರ ಪರಿಣಾಮವಾಗಿ ಕೆಲವು ನಗರಗಳಲ್ಲಿ ಸುಧಾರಣೆಗಳನ್ನು ಕಂಡಿದೆ. ಆದರೆ, ಯೋಜನೆಗಳನ್ನು ಸಂಪೂರ್ಣವಾಗಿ ನಿರ್ವಹಿಸುವಲ್ಲಿ ಮತ್ತು ಒದಗಿಸಿದ ಹಣವನ್ನು ಉತ್ತಮವಾಗಿ ಬಳಸಿಕೊಳ್ಳುವಲ್ಲಿ ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದೆ.
2019 ರಲ್ಲಿ ಪ್ರಾರಂಭವಾದ NCAP, ನಗರ-ನಿರ್ದಿಷ್ಟ ಕ್ಲೀನ್ ಏರ್ ಆ್ಯಕ್ಷನ್ ಯೋಜನೆಗಳ (CAPs) ಮೂಲಕ 130 ನಗರಗಳಲ್ಲಿ ಅಥವಾ ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರಗಳಲ್ಲಿ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕವು ಸಕ್ರಿಯವಾಗಿ ಭಾಗವಹಿಸುತ್ತಿದೆ. ಕೇಂದ್ರವು 2019-20ನೇ ಹಣಕಾಸು ವರ್ಷದಿಂದ 2024-25ನೇ ವರ್ಷಕ್ಕೆ 597.52 ಕೋಟಿ ರೂ.ಗಳನ್ನು ಮತ್ತು 2025-26ಕ್ಕೆ 194.41 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಆದರೆ, ಈ ವರ್ಷ ಇದುವರೆಗೆ ಕೇವಲ 14.2 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ಕಾರ್ಯಕ್ರಮದ ಅನುಷ್ಠಾನದ ವಿಳಂಬದ ಬಗ್ಗೆ ಕಳವಳ ಉಂಟಾಗಿದೆ.
ಸಚಿವಾಲಯದ ಪ್ರಕಾರ, ಬೆಂಗಳೂರು, ದಾವಣಗೆರೆ ಮತ್ತು ಹುಬ್ಬಳ್ಳಿ-ಧಾರವಾಡ ಮೂಲ ವರ್ಷ 2017-18 ಕ್ಕೆ ಹೋಲಿಸಿದರೆ 2024-25ರ ಹಣಕಾಸು ವರ್ಷದಲ್ಲಿ PM10 (particulate matter) ಮಟ್ಟದಲ್ಲಿ ಶೇ 20 ರಿಂದ 40ರಷ್ಟು ಇಳಿಕೆ ಕಂಡುಬಂದಿದೆ. ಅಲ್ಲದೆ, ದಾವಣಗೆರೆ ಮತ್ತು ಕಲಬುರಗಿ ರಾಷ್ಟ್ರೀಯ ಆಂಬಿಯೆಂಟ್ ವಾಯು ಗುಣಮಟ್ಟ ಮಾನದಂಡಗಳನ್ನು (NAAQS) ಪೂರೈಸಿದ್ದು, PM10 ಸಾಂದ್ರತೆಯು 60 ಗ್ರಾಂಗಿಂತ ಕಡಿಮೆಯಾಗಿದೆ.
ಆದಾಗ್ಯೂ, ಕರ್ನಾಟಕದ ಎಲ್ಲ ನಗರಗಳು ಸಮಾನ ಸಾಧನೆ ಮಾಡಿಲ್ಲ. ಕಲಬುರಗಿಯು NAAQS ಮಾನದಂಡಗಳನ್ನು ಪೂರೈಸಿದ್ದರೂ, ಶೇ 20 ರಷ್ಟು ಸುಧಾರಣೆ ಕಂಡ ವಿಭಾಗದಲ್ಲಿ ಸ್ಥಾನ ಪಡೆದ ಕರ್ನಾಟಕದ ಏಕೈಕ ನಗರವಾಗಿದೆ. ಆದರೆ ಇಲ್ಲಿಯವರೆಗೆ, ಯಾವುದೇ ನಗರವು ಗಾಳಿಯ ಗುಣಮಟ್ಟವನ್ನು ಶೇ 40 ಕ್ಕಿಂತ ಹೆಚ್ಚು ಸುಧಾರಿಸಲು ಸಾಧ್ಯವಾಗಿಲ್ಲ. ಇದು ಗುರಿ ಮತ್ತು ಫಲಿತಾಂಶಗಳ ನಡುವಿನ ಅಂತರವನ್ನು ತೋರಿಸುತ್ತದೆ.
ಇತ್ತೀಚಿನ ನೀತಿ ಪರಿಷ್ಕರಣೆಗಳು ಮೆಕ್ಯಾನಿಕಲ್ ರಸ್ತೆ ಗುಡಿಸುವುದು (ಯಂತ್ರಗಳನ್ನು ಬಳಸಿ ಗುಡಿಸುವುದು), ಟ್ರಾಫಿಕ್ ಕಾರಿಡಾರ್‌ಗಳ ಹಸಿರೀಕರಣ, ರಸ್ತೆಗಳಲ್ಲಿನ ಧೂಳು ನಿಯಂತ್ರಣ ಮತ್ತು ಸಂಚಾರ ದಟ್ಟಣೆ ಸೇರಿದಂತೆ ಐದು ಪ್ರಮುಖ ಕಾರ್ಯಕ್ರಮಗಳಲ್ಲಿ ಹಣವನ್ನು ಬಳಸುವುದನ್ನು ಕಡ್ಡಾಯಗೊಳಿಸಿದೆ ಎಂದು ಸಚಿವಾಲಯ ಹೈಲೈಟ್ ಮಾಡಿದೆ. ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳು (ULBs), ರಾಜ್ಯ ಸರ್ಕಾರ ಮತ್ತು MoEF&CC ಸಹಯೋಗದೊಂದಿಗೆ, ಅಮೃತ್ ಮತ್ತು ಸ್ವಚ್ಛ ಭಾರತ್ ಮಿಷನ್‌ನಂತಹ ಇತರ ಸರ್ಕಾರಿ ಯೋಜನೆಗಳೊಂದಿಗೆ ಹೊಣೆಗಾರಿಕೆ ಮತ್ತು ಒಮ್ಮುಖವನ್ನು ಖಚಿತಪಡಿಸಿಕೊಳ್ಳಲು MoUs ಗಳಿಗೆ ಸಹಿ ಹಾಕಿವೆ.
ರಾಷ್ಟ್ರೀಯವಾಗಿ, NCAP ಅಡಿಯಲ್ಲಿ 130 ನಗರಗಳ ಪೈಕಿ 103 ನಗರಗಳಲ್ಲಿ PM10 ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. 25 ನಗರಗಳು ಶೇ 40 ಕ್ಕಿಂತ ಹೆಚ್ಚು ಸುಧಾರಣೆಯನ್ನು ಕಂಡಿವೆ. ಭಾರತದಾದ್ಯಂತ ಈ ಉಪಕ್ರಮಗಳನ್ನು ಬೆಂಬಲಿಸಲು ಒಟ್ಟು 13,036.52 ಕೋಟಿ ರೂ.ಗಳನ್ನು ಅನುದಾನವಾಗಿ ಬಿಡುಗಡೆ ಮಾಡಲಾಗಿದೆ.