ಬೆಂಗಳೂರು: ಜುಲೈ ಅಂತ್ಯದ ವೇಳೆಗೆ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಬಲವಾದ ಗಾಳಿ ಮತ್ತು ಮಧ್ಯಮ ಮಳೆಯಾಗುವ ಮುನ್ಸೂಚನೆಯನ್ನು ಭಾರತ ಹವಾಮಾನ ಇಲಾಖೆ (ಐಎಂಡಿ) ನೀಡಿದೆ.
ಇದೇ ವೇಳೆ ದಕ್ಷಿಣ ಒಳನಾಡಿನ (ಎಸ್‌ಐಕೆ) ಹೆಚ್ಚಿನ ಭಾಗಗಳಲ್ಲಿ ಮಳೆಯ ಕೊರತೆ ದಾಖಲಾಗಿದೆ ಎಂದು ಸಂಸ್ಥೆಯ ದತ್ತಾಂಶಗಳಿಂದ ತಿಳಿದುಬಂದಿದೆ.
ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದ್ದು, ಗಂಟೆಗೆ 50-60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ, ಮಲ್ಪೆ ಬಂದರು ಮತ್ತು ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ, ಜುಲೈ 29 ರವರೆಗೆ ಕರಾವಳಿ ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದ್ದರೆ, ಉತ್ತರ ಒಳನಾಡಿನ (ಬೆಳಗಾವಿ (-36%), ಬೀದರ್ (-68%), ಧಾರವಾಡ (-7%), ಕಲಬುರಗಿ (-34%) ಮತ್ತು ಕೊಪ್ಪಳ (-85%)) ಐದು ಪ್ರದೇಶಗಳಲ್ಲಿ ಮಳೆಯ ಕೊರತೆ ಕಂಡುಬಂದಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಶೇ.29ರಷ್ಟು ಮಳೆ ಕೊರತೆ ಕಂಡು ಬಂದಿದ್ದರೆ, ಬೆಂಗಳೂರು ನಗರದಲ್ಲಿ ಶೇ.42, ಚಾಮರಾಜನಗ ಶೇ.52, ಹಾಸನ ಶೇ.208, ಚಿಂತಾಮಣಿ ಶೇ.66, ಮೈಸೂರು ಶೇ.99 ಮತ್ತು ಶಿವಮೊಗ್ಗ ಶೇ.31ರಷ್ಟು ಮಳೆ ಕೊರತೆಯಾಗಿದೆ ಎಂದು ತಿಳಿಸಿದೆ.
ಕಳೆದ ವರ್ಷವೂ ದಕ್ಷಿಣ ಒಳನಾಡಿನ ಹೆಚ್ಚಿನ ಭಾಗಗಳಲ್ಲಿ ಮಳೆಯ ಕೊರತೆ ದಾಖಲಾಗಿತ್ತು ಎಂದು ಬೆಂಗಳೂರಿನ ಐಎಂಡಿಯ ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ಹೇಳಿದ್ದಾರೆ.
ಮಳೆ ಕೊರತೆ ನಗರ ಪ್ರದೇಶಗಳಿಗೆ ಪ್ರಯೋಜನವಾಗಿದ್ದರೂ ಕೃಷಿ ವಲಯಕ್ಕೆ ಇದು ಆತಂಕಕಾರಿ ವಿಚಾರವಾಗಿದೆ. ಇದು ಬೆಳೆ ಮತ್ತು ಕೊಯ್ಲಿನ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಗರಿಷ್ಠ ತಾಪಮಾನದಲ್ಲಿ ಕುಸಿತ ಕಂಡು ಬಂದಿದ್ದು, ಜುಲೈ 28 ರಂದು ನಗರದಲ್ಲಿ ಗರಿಷ್ಠ 26.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದರೊಂದಿಗೆ 1.4 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ. ಮಂಗಳವಾರ ಸಂಜೆ 5.30 ರವರೆಗೆ ನಗರದಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಕನಿಷ್ಠ ತಾಪಮಾನದಲ್ಲೂ ಇಳಿಕೆಯಾಗಿದ್ದು, ಮಂಗಳವಾರ ಬೆಳಿಗ್ಗೆ 8.30ಕ್ಕೆ ಕನಿಷ್ಠ ತಾಪಮಾನ 19.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸಾಮಾನ್ಯ ಕನಿಷ್ಠ ತಾಪಮಾನಕ್ಕಿಂತ 0.7 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ. ಸೋಮವಾರವೂ ಇದೇ ರೀತಿಯ ಹವಾಮಾನ ದಾಖಲಾಗಿದ್ದು, 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.