ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದ್ದು 6ನೇ ಸ್ಥಳದಲ್ಲಿ ಸಮಾಧಿ ಅಗೆಯುವ ವೇಳೆ ಅಸ್ಥಿಪಂಜರ ಅವಶೇಷಗಳು ಪತ್ತೆಯಾಗಿವೆ. ಮೂರನೇ ದಿನವೂ ಎಸ್ಐಟಿ ತಂಡ ನೇತ್ರಾವತಿ ನದಿಯ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಸಾಕ್ಷಿ-ದೂರುದಾರರ ತೋರಿಸಿದ್ದ 6ನೇ ಸ್ಥಳದಲ್ಲಿ ಶೋಧ ಕಾರ್ಯವನ್ನು ಪ್ರಾರಂಭಿಸಿತು. ಒಂದೂವರೆ ಗಂಟೆಗಳ ತೀವ್ರ ಶೋಧದ ನಂತರ ತಲೆಬುರುಡೆ, ಕಾಲಿನ ಭಾಗ ಸೇರಿದಂತೆ ಮಾನವ ದೇಹದ ಹಲವು ಮೂಳೆಗಳನ್ನು ಎಸ್ಐಟಿ ತಂಡ ವಶಕ್ಕೆ ಪಡೆದಿದೆ. ಸದ್ಯ ಎಸ್ಐಟಿ ತಂಡ 6ನೇ ಪಾಯಿಂಟ್ ಅನ್ನು ಸಂರಕ್ಷಿಸಲು ಮುಂದಾಗಿದೆ. ಹೀಗಾಗಿ ಈ ಭಾಗದಲ್ಲಿ ಮಳೆ ನೀರು ಬೀಳದಂತೆ ಟಾರ್ಪಲ್ ಹಾಕಿ ಶೆಡ್ ರೀತಿ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಎಸ್ಐಟಿ ತಂಡ ಮೂಲೆಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಫಾರೆನ್ಸಿಕ್ ಲ್ಯಾಬ್ ಗೆ ರವಾನಿಸಲಿದ್ದು ಡಿಎನ್‌ಎ ಪರೀಕ್ಷೆ ಸೇರಿದಂತೆ ವೈಜ್ಞಾನಿಕ ವಿಶ್ಲೇಷಣೆ ನಡೆಸಲಾಗುತ್ತದೆ.
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತು ಅವರ ಪತ್ನಿ ರಾಧಾ ನಕಲಿ ದಾಖಲೆ ಸೃಷ್ಟಿಸಿ ಸುಮಾರು 165 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 26.10 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಕಬಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಎಚ್ಸಿ ಬಾಲಕೃಷ್ಣ , ಯಶವಂತಪುರ ಶಾಸಕ ಎಸ್ಟಿ ಸೋಮಶೇಖರ್ ಆಪ್ತರು ಸೇರಿದಂತೆ ಒಟ್ಟು 22 ಮಂದಿ 800 ಕೋಟಿ ರೂ. ಮೌಲ್ಯದ 108 ಎಕರೆ ಸರ್ಕಾರಿ ಗೋಮಾಳ ಜಮೀನು ಕಬಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಸರ್ವೇ ನಂಬರ್ 233, 234, 235 ಮತ್ತು 236ರಲ್ಲಿ 26 ಎಕರೆ ಗೋಮಾಳ ಜಮೀನು ಇದರ ಮೌಲ್ಯ ಒಟ್ಟು 165 ಕೋಟಿ ರೂ ಮೌಲ್ಯದ್ದಾಗಿದೆ. ಈ ಪೈಕಿ 54 ಕೋಟಿ ರೂ ಮೌಲ್ಯದ 8 ಎಕರೆ ಜಮೀನು ಶಾಸಕ ಹೆಚ್ಸಿ ಬಾಲಕೃಷ್ಣ ತಮ್ಮ ಪತ್ನಿ ರಾಧಾ ಬಾಲಕೃಷ್ಣ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂದು ಎನ್.ಆರ್ ರಮೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದಲ್ಲಿ 20 ಬಿಲಿಯನ್ ಡಾಲರ್ ಕ್ವಾಂಟಮ್ ಆರ್ಥಿಕತೆಯನ್ನು ಸೃಷ್ಟಿಸಲು ಕರ್ನಾಟಕ ಕ್ವಾಂಟಮ್ ಮಿಷನ್ ಅನ್ನು ಘೋಷಿಸಿರುವ ಸಿಎಂ ಸಿದ್ದರಾಮಯ್ಯ ಇದಕ್ಕಾಗಿ 1,000 ಕೋಟಿ ರೂ. ನಿಧಿಯನ್ನು ಮೀಸಲಿಡುವುದಾಗಿ ಹೇಳಿದ್ದಾರೆ. ಇದು ಕರ್ನಾಟಕದ ಕ್ವಾಂಟಮ್ ವಿಷನ್ 2035ರ ಭಾಗವಾಗಿರುತ್ತದೆ ಎಂದರು. 'ಕ್ವಾಂಟಮ್ ಇಂಡಿಯಾ ಬೆಂಗಳೂರು' ಶೃಂಗಸಭೆಯ ಮೊದಲ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, 2035ರ ವೇಳೆಗೆ ನಾವು 10,000 ಉನ್ನತ ಕೌಶಲ್ಯದ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಕರ್ನಾಟಕವನ್ನು ಏಷ್ಯಾದ ಕ್ವಾಂಟಮ್ ರಾಜಧಾನಿಯಾಗಿ ಸ್ಥಾಪಿಸುವ ಗುರಿ ಹೊಂದಿದ್ದೇವೆ ಎಂದರು. ಈ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮಹಾರಾಷ್ಟ್ರವನ್ನು ತೊರೆಯಲು ಬಯಸುವ ಎಲ್ಲಾ ಕ್ವಾಂಟಮ್ ಟೆಕ್ ಸಂಸ್ಥೆಗಳಿಗೆ ಬೆಂಗಳೂರಿನಲ್ಲಿ ತಮ್ಮ ಸೌಲಭ್ಯಗಳನ್ನು ಸ್ಥಾಪಿಸಲು ಸ್ವಾಗತಿಸಲಾಗುವುದು ಎಂದು ಹೇಳಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ರಾಜ್ಯದಾದ್ಯಂತ 32.68 ಲಕ್ಷ ಲೀಟರ್‌ಗೂ ಹೆಚ್ಚು ಬಳಸಿದ ಅಡುಗೆ ಎಣ್ಣೆ ಸಂಗ್ರಹಿಸಿದೆ. ಇದನ್ನೆಲ್ಲಾ ಪರೀಕ್ಷಿಸಿರುವ ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಂದು ಖಾದ್ಯ ತೈಲ ತಯಾರಕರು, ಹೋಟೆಲ್‌ಗಳು ಮತ್ತು ಬೇಕರಿಗಳಿಗೆ ಆಹಾರ ಸುರಕ್ಷತಾ ಮಾನದಂಡಗಳ ಅನುಸರಣೆಯನ್ನು ಬಲಪಡಿಸಲು ಹೊಸ ನಿರ್ದೇಶನಗಳನ್ನು ನೀಡಿದೆ. ಎಲ್ಲ ಅಡುಗೆ ಎಣ್ಣೆ ತಯಾರಿಕಾ ಘಟಕಗಳು ಈಗ ತಮ್ಮ ಉತ್ಪನ್ನಗಳನ್ನು ವಿಟಮಿನ್ ಎ ಮತ್ತು ಡಿ ಯಿಂದ ಬಲಪಡಿಸಲು, ಕಟ್ಟುನಿಟ್ಟಾದ ನೈರ್ಮಲ್ಯ ಮಾನದಂಡಗಳನ್ನು ಕಾಪಾಡಿಕೊಳ್ಳಲು ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ಎಣ್ಣೆಗಳನ್ನು ಪರೀಕ್ಷಿಸಲು ನಿರ್ದೇಶಿಸಲಾಗಿದೆ. FSSAI ಮಾನದಂಡಗಳಿಗೆ ಅನುಗುಣವಾಗಿ ಸರಿಯಾದ ಲೇಬಲಿಂಗ್ ಮಾಡುವುದನ್ನು ಸಹ ಕಡ್ಡಾಯಗೊಳಿಸಲಾಗಿದೆ.
ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ವಿಡಿಯೋ ಶೂಟ್ ಮಾಡಿ, ವಾಹನ ಸವಾರರಿಗೆ ಕಿರಿಕಿರಿಯುಂಟು ಮಾಡಿದ German Influencer ಯೂನೆಸ್ ಜರೋ ಎಂಬಾತನನ್ನು ಕಬ್ಬನ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 11.2 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಯೂನೆಸ್ ಜರೋ ಯಾವುದೇ ಅನುಮತಿ ಪಡೆಯದೆ ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ್ದರು. ಚರ್ಚ್ ಸ್ಟ್ರೀಟ್‌ನಲ್ಲಿ ಸಂಚಾರಕ್ಕೆ ಅಡ್ಡಿಯುಂಟುಮಾಡಿತು. ಅಲ್ಲದೆ ಕೆಲವು ವಾಹನ ಚಾಲಕರು ಸಾರ್ವಜನಿಕ ಕಿರಿಕಿರಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಯೂನೆಸ್ ಜರೋನನ್ನು ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.