ಬೆಂಗಳೂರು: ಬೀದಿ ನಾಯಿ ಕಡಿತಕ್ಕೆ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಘಟನೆ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧವಾಗಿ ಗರಂ ಆಗಿರುವ ಲೋಕಾಯುಕ್ತ, ಪ್ರಕರಣ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಎಸ್ಪಿ ವಂಶಿಕೃಷ್ಣ ಕೋನಾ ನೇತೃತ್ವದ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖಾ ವರದಿಯನ್ನ ನಾಲ್ಕು ದಿನದೊಳಗೆ ನೀಡುವಂತೆ ಲೋಕಾಯುಕ್ತರು ನಿರ್ದೇಶಿಸಿದ್ದಾರೆ.
2024ರ ಆಗಸ್ಟ್ ತಿಂಗಳಿನಲ್ಲಿ ಬೆಳಗಿನ ವಾಕಿಂಗ್'ಗೆ ಹೋಗಿದ್ದ 76 ವರ್ಷದ ರಾಜ್ದುಲಾರಿ ಸಿನ್ಹಾ ಎಂಬ ಮಹಿಳೆಯ ಮೇಲೆ ಬೀದಿ ನಾಯಿಗಳ ಗುಂಪೊಂದು ದಾಳಿ ಮಾಡಿತ್ತು. ತೀವ್ರ ಗಾಯಗಳಿಂದಾಗಿ ಮಹಿಳೆ ಸಾವನ್ನಪ್ಪಿದ್ದರು. ಘಟನೆ ಬಳಿಕ ಘಟನೆಯನ್ನು ನಿಯಂತ್ರಿಸಲು ಬಿಬಿಎಂದ ಅಧಿಕಾರಿಗಳಿಗೆ ಲೋಕಾಯುಕ್ತ ಹಲವಾಹು ನಿರ್ದೇಶನಗಳನ್ನು ನೀಡಿತ್ತು.
ಇದರ ಹೊರತಾಗಿಯೂ ಮತ್ತೊಂದು ಘಟನೆ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವಿರುದ್ಧ ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ್ ಗರಂ ಆಗಿದ್ದಾರೆ.
ವಲಯ ಆಯುಕ್ತರು, ಯಲಹಂಕ ಜಂಟಿ ಆಯುಕ್ತರು, ಜಂಟಿ ನಿರ್ದೇಶಕರು, ಪಶುಸಂಗೋಪನಾ ಉಪ ನಿರ್ದೇಶಕರು, ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ನ್ಯಾಯಮೂರ್ತಿ ಪಾಟೀಲ್, ನಾಯಿಗಳನ್ನು ಗುರುತಿಸಲು, ದಾಳಿಗಳಾಗುತ್ತಿರುವುದೇಕೆ ಎಂಬುದನ್ನು ಪರೀಕ್ಷಿಸಲು, ತಜ್ಞರ ಅಭಿಪ್ರಾಯ ಪಡೆದ ನಂತರ ಅವುಗಳನ್ನು ಪ್ರತ್ಯೇಕಿಸಲು ಮತ್ತು ವೀಕ್ಷಣೆಯಲ್ಲಿಡಲು ಸೂಚನೆ ನೀಡಿದ್ದಾರೆ.
ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದ ಬಳಿಕವೂ ಬ್ಯಾಟರಾಯನಪುರ ವಾರ್ಡ್‌ನಲ್ಲಿ ರಾಜ್ದುಲಾರಿ ಸಿನ್ಹಾ ಎದುರಿಸಿದಂತೆಯೇ ಸೀತಪ್ಪ ಅವರ ಘಟನೆಯೂ ನಡೆದಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡೆ. ತನಿಖೆಯ ವರದಿಯನ್ನು ಪಡೆದ ನಂತರ ಮುಂದಿನ ಕ್ರಮದ ಕುರಿತು ಚಿಂತನೆ ನಡೆಸಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳು ತಿಳಿಸಿದರು.
ಈ ನಡುವೆ ಲೋಕಾಯುಕ್ತರ ಮುಂದೆ ಹೇಳಿಕೆ ನೀಡಿರುವ ಅಧಿಕಾರಿಗಳು, ಜುಲೈ 28ರಂದು ಬೆಳಗಿನ ಜಾವ 3.30ಕ್ಕೆ ಬೀದಿ ನಾಯಿಗಳು ಕಚ್ಚಿದ್ದರಿಂದ ಸೀತಪ್ಪ ಅವರು ಸಾವನ್ನಪ್ಪಿದ್ದಾರೆ. ಈಗಾಗಲೇ 33 ಬೀದಿ ನಾಯಿಗಳನ್ನ ಹಿಡಿದು ನಿಗಾ ಘಟಕದಲ್ಲಿ ಇರಿಸಲಾಗಿದೆ. ಯಾವ ಬೀದಿ ನಾಯಿಗಳು ಕಚ್ಚಿವೆ ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲ. ಆದರೂ ಎಲ್ಲಾ ನಾಯಿಗಳಿಗೂ ಸೂಕ್ತ ಚಿಕಿತ್ಸೆ ನೀಡುವುದಾಗಿ ಹೇಳಿದರು.