ಬೆಂಗಳೂರು: ದೊಡ್ಡ ಪ್ರಮಾಣದ ಉದ್ಯೋಗಿಗಳ ವಜಾಗೊಳಿಸುವಿಕೆಯ ಹಿಂದಿನ ಕಾರಣ ವಿವರಿಸುವಂತೆ ತಮ್ಮ ಇಲಾಖೆಯು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ನೋಟಿಸ್ ನೀಡಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಗುರುವಾರ ಹೇಳಿದ್ದಾರೆ.
"ನಿನ್ನೆ ಟಿಸಿಎಸ್ 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ನಮಗೆ ಮಾಹಿತಿ ಸಿಕ್ಕಿತು. ಅದಕ್ಕೆ ಕಾರಣ ತಿಳಿಯಲು, ಸಮಾಲೋಚನೆ ನಡೆಸಲು ನಮ್ಮ ಇಲಾಖೆ ಟಿಸಿಎಸ್ ಅಧಿಕಾರಿಗಳನ್ನು ಕರೆದಿದೆ" ಎಂದು ಸಚಿವರು ಇಂದು ಸುದ್ದಿಗಾರರಿಗೆ ತಿಳಿಸಿದರು.
ಸನ್‌ರೈಸ್ ಇಂಡಸ್ಟ್ರೀಸ್‌ಗೆ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ನೀಡಲಾಗಿದೆ. ಆದರೆ ಷರತ್ತುಗಳನ್ನು ವಿಧಿಸಲಾಗಿದೆ ಎಂದು ಅವರು ಹೇಳಿದರು.
"ನಾವು ಸನ್‌ರೈಸ್ ಕಂಪನಿಗಳನ್ನು ಕಾರ್ಮಿಕ ಕಾನೂನುಗಳ ವ್ಯಾಪ್ತಿಯಿಂದ ಹೊರಗಿಟ್ಟಿದ್ದೇವೆ ಮತ್ತು ಕಳೆದ ಐದು ವರ್ಷಗಳಿಂದ ನಾವು ಅವರಿಗೆ ವರ್ಷದಿಂದ ವರ್ಷಕ್ಕೆ ವಿನಾಯಿತಿ ನೀಡುತ್ತಿದ್ದೇವೆ. ಆದರೆ ಇನ್ನೂ ಷರತ್ತುಗಳನ್ನು ವಿಧಿಸಲಾಗಿದೆ" ಎಂದು ಸಚಿವರು ತಿಳಿಸಿದರು.
"ಅವರು ಯಾರನ್ನಾದರೂ ವಜಾಗೊಳಿಸಲು ಬಯಸಿದರೆ, ಅವರು ಆ ಬಗ್ಗೆ ನಮಗೆ ಮಾಹಿತಿ ನೀಡಬೇಕು. ಅದರಂತೆ, ನಾವು ಅವರೊಂದಿಗೆ ಮಾತನಾಡುತ್ತೇವೆ" ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಕಾರ್ಮಿಕರ ಕೆಲಸ ಅವಧಿಯನ್ನು 9 ರಿಂದ 10ಗಂಟೆಗೆ ಹೆಚ್ಚಿಸುವ ಕೇಂದ್ರ ಸರ್ಕಾರದ ಕ್ರಮ ವೈಜ್ಞಾನಿಕವಾಗಿ ಸರಿಯಿಲ್ಲ. ಹೀಗಾಗಿ, ಕೇಂದ್ರದ ಈ ಪ್ರಸ್ತಾವನೆಗೆ ನನ್ನ ಒಪ್ಪಿಗೆ ಇಲ್ಲ ಎಂದು ಸಚಿವರು ತಿಳಿಸಿದರು.
1961ರ ಕರ್ನಾಟಕ ಅಂಗಡಿ ಮತ್ತು ಸ್ಥಾಪನೆ ಕಾಯ್ದೆಗೆ ತಿದ್ದುಪಡಿ ತರುವ ಹಾಗೂ ಕಾರ್ಮಿಕರ ಕೆಲಸದ ಅವಧಿಯನ್ನು 9 ರಿಂದ 10 ಗಂಟೆಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಕಾರ್ಮಿಕ ಇಲಾಖೆ ಎಲ್ಲ ರಾಜ್ಯಗಳಿಗೂ ಕಳುಹಿಸಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಈ ಪ್ರಸ್ತಾವನೆ ಜಾರಿ ಸಂಬಂಧ ಕಾರ್ಮಿಕರ ಅಭಿಪ್ರಾಯ ಪಡೆಯುತ್ತೇವೆ ಎಂದರು.