ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ನಟ ಕಮಲ್ ಹಾಸನ್ ಅವರ 'ಥಗ್ ಲೈಫ್' ಚಿತ್ರ ಬಿಡುಗಡೆಗೆ ರಾಜ್ಯದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕಮಲ್ ಹಾಸನ್ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ರಾಜ್ಯದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇತ್ತೀಚೆಗೆ ಘೋಷಿಸಿದೆ. ಇದರ ಬೆನ್ನಲ್ಲೇ, ಚಿತ್ರದ ಸಹ-ನಿರ್ಮಾಪಕರಾದ ರಾಜ್‌ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್, ಕರ್ನಾಟಕದಲ್ಲಿ ಯಾವುದೇ ಅಡೆತಡೆಯಿಲ್ಲದೆ ಚಿತ್ರವನ್ನು ಪ್ರದರ್ಶಿಸಲು ಅವಕಾಶ ನೀಡುವಂತೆ ನಿರ್ದೇಶನ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈಮಧ್ಯೆ, ಥಗ್ ಲೈಫ್ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡದಂತೆ KFCC ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ಇದಕ್ಕೆ ಸಿದ್ದರಾಮಯ್ಯ ರಾಜ್ಯ ಸರ್ಕಾರ ಕಾನೂನಾತ್ಮಕವಾಗಿ ಸಹಕಾರ ನೀಡುತ್ತೆ ಎಂದು ಭರವಸೆ ನೀಡಿದರು. ಈ ಮಧ್ಯೆ, ಕಮಲ್ ಹಾಸನ್‌ಗೆ ಜ್ಞಾನದ ಕೊರತೆ ಇದೆ. ಯಾರೆಲ್ಲಾ ಶಿವಣ್ಣನ ರೀತಿ ಕಮಲ್ ಹಾಸನ್ ಪರವಾಗಿ ಇದ್ದಾರೋ ಅವರೆಲ್ಲರೂ ನನ್ನ ದೃಷ್ಟಿಯಲ್ಲಿ ನಾಡದ್ರೋಹಿಗಳು ಎಂದು ಕನ್ನಡದ ಹಿರಿಯ ನಟ ಹಾಗೂ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದಲ್ಲಿ 35 ವರ್ಷದ ವ್ಯಕ್ತಿಯನ್ನು ಏಳು ಜನರ ತಂಡವೊಂದು ಬೇಕರಿಯಲ್ಲಿ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚನ್ನಪ್ಪ ಹುಸೇನಪ್ಪ ನಾರಿನಾಳ್ ಎಂಬಾತನನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುತ್ತಿರುವ ದೃಶ್ಯ ಬೇಕರಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೊಲೆಯಾದ ವ್ಯಕ್ತಿಯ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಳೆಯ ದ್ವೇಷ ಮತ್ತು ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ಬೆನ್ನಲ್ಲೇ ಇದೀಗ ಪೊಲೀಸರು ಹಿಂದೂ ಮುಖಂಡರ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತಿದ್ದಾರೆ. ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪುತ್ತೂರು ವಿಭಾಗದ ಸಹಾಯಕ ಆಯುಕ್ತರು ಗಡೀಪಾರು ನೋಟಿಸ್ ಜಾರಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಿ ನೋಟಿಸ್ನಲ್ಲಿ ಆದೇಶಿಸಲಾಗಿದೆ. ಮತ್ತೊಂದೆಡೆ, ಸುಹಾಸ್ ಶೆಟ್ಡಿ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಪ್ರತ್ಯೇಕ ಸ್ಥಳವಿಲ್ಲದೆ ಧೂಮಪಾನಕ್ಕೆ ಅವಕಾಶ ನೀಡಿ, ನಿಯಮ ಉಲ್ಲಂಘನೆ ಮಾಡಿದ ಆರೋಪ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮೇ 29ರಂದು ಕಬ್ಬನ್ ಪಾರ್ಕ್ ಪೊಲೀಸರು ಪಬ್ ಮೇಲೆ ದಾಳಿ ಮಾಡಿ, ಸ್ವಯಂಪ್ರೇರಿತವಾಗಿ ಎನ್‌ಸಿಆರ್ ದಾಖಲಿಸಿಕೊಂಡಿದ್ದರು. ಇದೀಗ ನ್ಯಾಯಾಲಯದ ಅನುಮತಿ ಪಡೆದು, ಕೊಟ್ಪಾ ಕಾಯ್ದೆಯಡಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಮ್ಯಾನೇಜರ್, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2024ರ ಜುಲೈನಲ್ಲಿ ಇದೇ ಬಾರ್ ಮೇಲೆ ಅವಧಿ ಮೀರಿ ಪಬ್ ನಡೆಸುತ್ತಿದ್ದರು ಎಂದು ದೂರು ದಾಖಲಾಗಿತ್ತು.
ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಶನಿವಾರ ಗುಬ್ಬಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹೋರಾಟಗಾರರ ಮೇಲೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಶಾಸಕರು, ಇಬ್ಬರು ಸ್ವಾಮೀಜಿಗಳು ವಿರುದ್ಧ ಎಫ್ಐಆರ್ ದಾಖಲಾಗಿದೆ. ಜೆಡಿಎಸ್‌ನ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ತುಮಕೂರು ಗ್ರಾಮೀಣ ಶಾಸಕ ಬಿ. ಸುರೇಶ್ ಗೌಡ ಮತ್ತು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಸೇರಿದಂತೆ 11 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿಗಳಲ್ಲಿ ಒಬ್ಬರಿಗೆ ತೀವ್ರವಾಗಿ ಗಾಯಗೊಂಡಿದ್ದರು. ಮತ್ತೊಂದೆಡೆ, ತಾಂತ್ರಿಕ ಸಮಿತಿ ವರದಿ ಆಧರಿಸಿ ಹೇಮಾವತಿ ಕೆನಾಲ್ ನಿರ್ಮಾಣದ ಕೆಲಸ ಪ್ರಾರಂಭ ಮಾಡಿದ್ದೇವು. ಆದರೆ ಈಗ ಬಿಜೆಪಿ ಶಾಸಕರು ಗಲಾಟೆ ಮಾಡಿಸುತ್ತಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಆರೋಪ ಮಾಡಿದ್ದಾರೆ.