ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಕೂಡಲೇ ಬೆಂಗಳೂರು ನಗರ ಪೊಲೀಸ್ ಕಮಿಷನರ್ (Bengaluru Police Commissioner) ಅವರನ್ನು ನೇಮಕ ಮಾಡಿದೆ.
ನಿನ್ನೆ ತಡರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಕಾಲ್ತುಳಿತ ಘಟನೆಗೆ ರಾಜ್ಯದ ಪೊಲೀಸ್ ಇಲಾಖೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಗರ ಪೊಲೀಸ್ ಆಯುಕ್ತರ ತಲೆದಂಡವಾಗಿದ್ದು, ಬೆಂಗಳೂರಿನ 39ನೇ ಪೊಲೀಸ್ ಕಮಿಷನರ್ ಆಗಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ತಡರಾತ್ರಿ ನೂತನ ಕಮಿಷನರ್ ಅಧಿಕಾರ ಸ್ವೀಕಾರ
ಬೆಂಗಳೂರಿನ 39ನೇ ಪೊಲೀಸ್ ಕಮಿಷನರ್ ಆಗಿ ಸೀಮಂತ್ ಕುಮಾರ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ತಡರಾತ್ರಿ 12.15ಕ್ಕೆ ಸಹಿ ಮಾಡುವ ಮೂಲಕ ಅಧಿಕಾರ ಸ್ವೀಕರಿಸಿದರು. ನೂತನ ಕಮಿಷನರ್ ಸೀಮಂತ್ ಕುಮಾರ್ ಅವರನ್ನು ಹಿರಿಯ ಅಧಿಕಾರಿಗಳು, ಡಿಸಿಪಿಗಳು ಸ್ವಾಗತಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಬಳಿಕ ನಗರದ ಅಧಿಕಾರಿಗಳ ಜೊತೆ ಕಮಿಷನರ್ ಕಿರು ಸಭೆ ನಡೆಸಿದರು.
ಕಠಿಣ ಪರಿಸ್ಥಿತಿಯಲ್ಲಿ ಅಧಿಕಾರ ಸ್ವೀಕರಿಸಿದ್ದೇನೆ
ಅಧಿಕಾರ ಸ್ವೀಕರಿಸಿದ ಬಳಿಕ ಮಾತಾಡಿದ ನೂತನ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಆದೇಶದ ಮೇಲೆ ಅಧಿಕಾರ ಸ್ವೀಕರಿಸಿದ್ದೀನೆ. ಇಂಥಹ ಕಠಿಣ ಪರಿಸ್ಥಿತಿಯಲ್ಲೂ ಕೂಡ ಅಧಿಕಾರ ಸ್ವೀಕರಿಸಿದ್ದು, ಹಿಂದಿನ ಕಮಿಷನರ್ ಉತ್ತಮ ಕೆಲಸ ಮಾಡಿದ್ದಾರೆ. ಅದನ್ನ ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.
ಕಾಲ್ತುಳಿತದ ಬಗ್ಗೆ ಸದ್ಯಕ್ಕೆ ಪ್ರತಿಕ್ರಿಯಿಸುವುದಿಲ್ಲ
ನಾನು ಕೂಡ ಹಿಂದೆ ಇದೇ ಕಚೇರಿಯಲ್ಲಿ ಕೆಲಸ ಮಾಡಿದ್ದೆ. ಈಗ ಸಮಯ ಬೇರೆಯೇ ರೀತಿಯೇ ಇದೆ. ಕಾಲ್ತುಳಿತ ಪ್ರಕರಣದ ಬಗ್ಗೆ ಈಗಲೇ ನಾನು ಏನು ಪ್ರತಿಕ್ರಿಯೆ ನೀಡಲ್ಲ. ಅಧಿಕಾರಿಗಳೊಂದಿಗೆ ಸಭೆ ಮಾಡಿ ಅನಂತರ ಪ್ರತಿಕ್ರಿಯಿಸುತ್ತೇನೆ ಎಂದು ನೂತನ ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಮೊದಲ ಬಾರಿಗೆ ಎಡಿಜಿಬಿ ಹುದ್ದೆ ಅಧಿಕಾರಿ ಸಸ್ಪೆಂಡ್
ರಾಜ್ಯ ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಅಧಿಕಾರಿಯೊಬ್ಬರ ಅಮಾನತು ಆಗಿದ್ದು, ಬಿ ದಯಾನಂದ್ ಅವರ ಮುಂಬಡ್ತಿಗೂ ಇದರಿಂದ ತೊಂದರೆಯಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಹಾಗೂ ಇತರರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ಒಂದೇ ಪ್ರಕರಣದಲ್ಲಿ ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರು ಅಮಾನತುಗೊಂಡಿರುವುದು ಇದೇ ಮೊದಲು.
ಬಿ ದಯಾನಂದ್ ಅವರ ಅಮಾನತಿಗೆ ಪ್ರತಿಪಕ್ಷಗಳ ನಾಯಕರು ಅಷ್ಟೇ ಅಲ್ಲದೆ ಸಾರ್ವಜನಿಕ ವಲಯದಿಂದಲೂ ಸೋಷಿಯಲ್ ಮೀಡಿಯಾದಲ್ಲಿ ರಾಜ್ಯ ಸರ್ಕಾರ ವಿರುದ್ಧ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಸರಕಾರದ ಪ್ರಚಾರದ ಗೀಳಿನಿಂದಾದ ಆಚಾತುರ್ಯಕ್ಕೆ ಒಬ್ಬ ಪ್ರಾಮಾಣಿಕ, ದಕ್ಷ ಅಧಿಕಾರಿಗೆ ಅಮಾನತ್ತು ಮಾಡಲಾಗಿದೆ ಎಂದು ಟೀಕಿಸುತ್ತಿದ್ದಾರೆ.