ಜಂಟಿ ಸುದ್ದಿಗೋಷ್ಠಿ ಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರು  
ರಾಜ್ಯ

'ಸಿಎಂ ಮನೆಗೆ ಫ್ರಾಂಚೈಸಿಯವರನ್ನು ಕರೆದುಕೊಂಡು ಹೋದವರು ಯಾರು, ಯಾಕೆ'?: ಸರ್ಕಾರಕ್ಕೆ ಪ್ರತಿಪಕ್ಷ ನಾಯಕರಿಂದ ಪ್ರಶ್ನೆಗಳ ಸುರಿಮಳೆ

ಕಾಲ್ತುಳಿತ ದುರಂತಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಸಂಭ್ರಮಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸೇರಿ ಹಲವರು ಅಧಿಕಾರಿಗಳ ತಲೆದಂಡವಾಗಿದೆ.

ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ,ಪ್ರತಿಪಕ್ಷ ನಾಯಕ ಆರ್ ಅಶೋಕ್, ಕಾಲ್ತುಳಿತ ದುರಂತಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.

ಇದೇ ವೇಳೆ ಸರ್ಕಾರದ ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿದರು.

  • ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಪೊಲೀಸ್ ಆಯುಕ್ತರನ್ನು ಅಮಾನತು ಮಾಡಲಾಗಿದೆ. ಇದೇ ಆಯುಕ್ತರು ಇದ್ದಾಗಲೇ ಹೊಸ ವರ್ಷ ಸಂಭ್ರಮಾಚರಣೆಯೂ ನಡೆದಿತ್ತಲ್ಲವೇ? ಆಗ ಯಶಸ್ವಿಯಾಗಿ ಭದ್ರತೆ ಹೊಣೆಗಾರಿಕೆ ವಹಿಸಿದ್ದರಲ್ಲವೇ? ಹಾಗಾದರೆ ಈಗ ಏನಾಯಿತು?

  • ಗಾಯಾಳುಗಳನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದು ಪೊಲೀಸರೇ. ನೀವು ಮೊಸರು ತಿಂದು ಪೊಲೀಸರ ಮೂತಿಗೆ ಒರೆಸಿದಿರಲ್ಲವೇ?

  • ಅನಧಿಕೃತ ಕಾರ್ಯಕ್ರಮ ಎಂದು ಪೊಲೀಸರು ದಾಖಲಿಸಿದ ಎಫ್​ಐಆರ್​​ನಲ್ಲಿ ಹೇಳಲಾಗಿದೆ. ಹಾಗಾದರೆ ಅನಧಿಕೃತ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಿದ್ದೇಕೆ?

  • ಸಿಎಂ ಮನೆಗೆ ಫ್ರಾಂಚೈಸಿಯವರನ್ನು ಕರೆದುಕೊಂಡು ಹೋದವರು ಯಾರು, ಯಾಕೆ?

  • ಕಮಿಷನರ್ ಅನುಮತಿ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಹೇಳಿದವರು ಯಾರು?

  • ‘ಯಾರು ಏನೇ ಮಾಡಿದರು ನಾನು ಇದ್ದೀನಿ’ ಎಂದವರು ಯಾರು?

  • ವಿಧಾನಸೌಧದಲ್ಲಿ ಏನು ಗಲಾಟೆ ಆಗಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗಲಾಟೆ ಆಗಿದ್ದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಾದರೆ, ಆ ಸ್ಟೇಡಿಯಂ ಕರ್ನಾಟಕದಲ್ಲಿ ಇಲ್ಲವೇ?

  • ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದು ಪೊಲೀಸರ ಅನುಮತಿ ಇಲ್ಲದ ಕಾರ್ಯಕ್ರಮವೇ ಹೌದಾದರೆ ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಿದ್ದೇಕೆ? ಎಂಬ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳಿದ್ದಾರೆ.

‘ಅಮಾನತು ನಾಟಕ’

ಬೆಂಗಳೂರು ಕಾಲ್ತುಳಿತ ಸಂಬಂಧ ಪೊಲೀಸರ ಅಮಾನತು ಮಾಡಿರುವುದು ನಾಟಕವಷ್ಟೇ. ‘ಒಂದು ತಿಂಗಳು ಸಸ್ಪೆಂಡ್ ಅಂತಾ ನಾಟಕ ಮಾಡುತ್ತೇವೆ, ಬೇಸರ ಮಾಡಿಕೊಳ್ಳಬೇಡಿ’ ಎಂಬುದಾಗಿ ಮೊದಲೇ ಹೇಳಿರುತ್ತಾರೆ ಅಷ್ಟೇ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಟೀಕಿಸಿದರು.

ಪೊಲೀಸ್ ಇಲಾಖೆ ಸಲಹೆ ಧಿಕ್ಕರಿಸಿ ಸರ್ಕಾರ ಕಾರ್ಯಕ್ರಮ ಆಯೋಜನೆ ಮಾಡಿತ್ತು. ತಮ್ಮ ತಪ್ಪು ಮುಚ್ಚಿಕೊಳ್ಳಲು ಕಮಿಷನರ್​ ಸೇರಿ ಹಲವರ ಅಮಾನತು ಮಾಡಿದ್ದಾರೆ. ಹೊಸ ವರ್ಷಾಚರಣೆ ವೇಳೆ ಕಮಿಷನರ್ ದಯಾನಂದ್ ಇದ್ದರು. ಲಕ್ಷಾಂತರ ಜನ ಸೇರಿದ್ದರೂ ಸಣ್ಣ ಅಹಿತಕರ ಘಟನೆಗೆ ಅವಕಾಶ ಕೊಟ್ಟಿರಲಿಲ್ಲ. ನಾನು ಬಿ. ದಯಾನಂದ್​ ಪರ ವಕಾಲತ್ತು ಮಾಡುತ್ತಿಲ್ಲ. ಸಸ್ಪೆಂಡ್ ಆದ ಡಿಸಿಪಿ ಒಬ್ಬರು ಅಪ್ಪಯ್ಯನ ಆತ್ಮೀಯರು ಎಂದೂ ಕುಮಾರಸ್ವಾಮಿ ಹೇಳಿದರು.

ರಾಜ್ಯ ಸರ್ಕಾರವು ಸಿಐಡಿ, ನ್ಯಾಯಾಂಗ ತನಿಖೆ ಮತ್ತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ ಎಂದು ಹೇಳುತ್ತಾರೆ. ಮೂರೂ ಸಂಸ್ಥೆಗಳು ತನಿಖೆ ನಡೆಸುವುದರಿಂದ ನ್ಯಾಯ ದೊರೆಯುವುದಿಲ್ಲ. ಯಾವುದೇ ಸತ್ಯ ಹೊರಬರಲು ಸಾಧ್ಯವಿಲ್ಲ ಎಂದರು.

ಅಂಧ ಮುಖ್ಯಮಂತ್ರಿ, ಅಂಧ ರಾಜ್ಯ

ಐಪಿಎಲ್ ಕಪ್ ಗೆದ್ದಿದ್ದು ಆರ್​ಸಿಬಿ, ಫೋಟೋಗೆ ಪೋಸ್ ಕೊಟ್ಟಿದ್ದು ಕೆಪಿಸಿಸಿ ತಂಡ. ಅಂಧ ಮುಖ್ಯಮಂತ್ರಿ, ಅಂಧ ರಾಜ್ಯ ಎಂದು ಅಶೋಕ್ ಕಿಡಿಕಾರಿದರು. ಸಿಎಂ ಸಿದ್ದರಾಮಯ್ಯ ಬ್ಯಾಟರ್, ಡಿಸಿಎಂ ಡಿಕೆ​ ಬೌಲರ್. ಹೇಗಾದರೂ ಮಾಡಿ ಸಿದ್ದರಾಮಯ್ಯರನ್ನು ರನೌಟ್ ಮಾಡಿಸಬೇಕು ಎಂಬುದು ಡಿಕೆ ಆಶೆ. ಆದರೆ ಹಿಟ್ ವಿಕೆಟ್ ಆಗಿದ್ದು ರಾಜ್ಯದ ಜನರು ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ವಿರಾಟ್ ಕೊಹ್ಲಿ ಹಾಗೂ ಆರ್​ಸಿಬಿ ತಂಡದ್ದು ಇದರಲ್ಲಿ ತಪ್ಪಿಲ್ಲ ಎಂದರು. ಸರ್ಕಾರ ಆರೋಪಿ ಸ್ಥಾನದಲ್ಲಿದೆ, ಘಟನೆಯನ್ನು ಜಿಲ್ಲಾಧಿಕಾರಿಗಳು, ನಿವೃತ್ತ ನ್ಯಾಯಾಧೀಶರು ಅಥವಾ ಸಿಐಡಿಯಿಂದ ತನಿಖೆ ನಡೆಸಲು ಸಾಧ್ಯವಿಲ್ಲ. ಹಾಲಿ ಅಥವಾ ಮುಖ್ಯ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಿಎಂ, ಡಿಸಿಎಂ ಪ್ರಮುಖ ಆರೋಪಿಗಳು

ಕಾಲ್ತುಳಿತ ಘಟನೆಯ ಪ್ರಮುಖ ಆರೋಪಿಗಳು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಎಂದು ವಿಜಯೇಂದ್ರ ಆರೋಪಿಸಿದರು. ಕಾರ್ಯಕ್ರಮಕ್ಕೆ ಅನುಮತಿ ಇರಲಿಲ್ಲ ಎನ್ನುತ್ತಾರೆ. ಹಾಗಾದರೆ, ಡಿಸಿಎಂ ಡಿಕೆ ಶಿವಕುಮಾರ್ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಟ್ರೋಫಿಗೆ ಮುತ್ತಿಕ್ಕಿ ಫೋಟೊಗೆ ಪೋಸ್ ಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿದರು.

"ಆರ್‌ಸಿಬಿ, ಡಿಎನ್‌ಎ ನಿರ್ವಹಣೆ ಮತ್ತು ಕೆಎಸ್‌ಸಿಎ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಅದು ಎ 1 ಆಗಿ ಸಿಎಂ, ಡಿವೈಸಿಎಂ 2 ಆಗಿ ಮತ್ತು ಗೃಹ ಸಚಿವರು ಎ 3 ಆಗಿ ಇರಬೇಕಿತ್ತು, ನೈತಿಕತೆ ಆಧಾರದ ಮೇಲೆ ಸಿಎಂ ಮತ್ತು ಡಿಸಿಎಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಜಾಗತಿಕ ನಾವೀನ್ಯತೆ ತಾಣವಾಗಿ ಪರಿವರ್ತಿಸಲು ಮೂರು ನೀತಿ ಅನಾವರಣಗೊಳಿಸಿದ ಸಿಎಂ

Ranji Trophy: ಚಂಡೀಗಢ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ ಮತ್ತು 185 ರನ್ ಭರ್ಜರಿ ಜಯ

Ranji Trophy: ಒಂದೂ ರನ್ ನೀಡದೇ 5 ವಿಕೆಟ್.. Amit Shukla ಐತಿಹಾಸಿಕ ದಾಖಲೆ, IPL 2026 ಹರಾಜಿಗೆ ಭರ್ಜರಿ ಸಿದ್ಧತೆ!

'Glad Was In Audience': ಮತ್ತೆ ಪ್ರಧಾನಿಯನ್ನು ಹಾಡಿ ಹೊಗಳಿದ ಶಶಿ ತರೂರ್, ಗುಲಾಮ ಮನಸ್ಥಿತಿ ಕುರಿತ ಹೇಳಿಕೆ, ಕಾಂಗ್ರೆಸ್ ಕೆಂಡ!

ಟ್ರಾಫಿಕ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದ ಸುರೇಶ್ ಕುಮಾರ್; ಅನುಭವ ಹಂಚಿಕೊಂಡ ಬಿಜೆಪಿ ಶಾಸಕ

SCROLL FOR NEXT