ಡಿ.ಕೆ. ಶಿವಕುಮಾರ್  
ರಾಜ್ಯ

ಜಾತಿಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಗೊಂದಲ ಬಗೆಹರಿಸಲು ಮತ್ತೊಮ್ಮೆ ಅವಕಾಶ: ಡಿ.ಕೆ ಶಿವಕುಮಾರ್

ಕೆಲವು ಸಂಘಟನೆ ಹಾಗೂ ಸಮಾಜಗಳಿಂದ ಈ ಜಾತಿ ಗಣತಿಗೆ ಅಪಸ್ವರ ಬಂದಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ನ್ಯಾಯಬದ್ಧವಾಗಿ ಅವಕಾಶ ಕಲ್ಪಿಸಿಕೊಡಬೇಕು ಎಂದು ವರಿಷ್ಠರು ನಮಗೆ ಮಾರ್ಗದರ್ಶನ ನೀಡಿದ್ದಾರೆ.

ನವದೆಹಲಿ: ಜಾತಿ ಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಸಮುದಾಯಗಳ ಅಂಕಿಅಂಶಗಳ ಬಗ್ಗೆ ಇರುವ ಗೊಂದಲ ನಿವಾರಣೆಗೆ ತೀರ್ಮಾನಿಸಲಾಗಿದೆ. ಮನೆ ಮನೆ ಸಮೀಕ್ಷೆ ಹಾಗೂ ಆನ್ಲೈನ್ ಮೂಲಕ ಎಲ್ಲರೂ ತಮ್ಮ ಮಾಹಿತಿಯನ್ನು ಮತ್ತೊಮ್ಮೆ ಸಲ್ಲಿಸಲು ಅವಕಾಶ ನೀಡಲಾಗುವುದು. ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ನವದೆಹಲಿಯಲ್ಲಿ ಎಐಸಿಸಿ ನಾಯಕರ ಸಭೆ ಬಳಿಕ ಮಾತನಾಡಿದ ಅವರು, ಮಂಗಳವಾರದಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಅವರು ನನ್ನನ್ನು ಹಾಗೂ ಮುಖ್ಯಮಂತ್ರಿಗಳನ್ನು ಕರೆಸಿ ಪಕ್ಷ ಸಂಘಟನೆ ವಿಚಾರವಾಗಿ, ರಾಜ್ಯ ರಾಜಕಾರಣ ಹಾಗೂ ಇತ್ತೀಚಿನ ಕಾಲ್ತುಳಿತ ಪ್ರಕರಣದ ಬಗ್ಗೆ ಚರ್ಚೆ ಮಾಡಲಾಯಿತು ಎಂದು ಹೇಳಿದರು.

ಜಾತಿ ಗಣತಿ ವಿಚಾರವಾಗಿ ಇದೇ ತಿಂಗಳ 12ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡಲು ನಿರ್ಧರಿಸಿದ್ದೆವು. ಈ ವಿಚಾರವಾಗಿ ಸಂಸದರು, ಶಾಸಕರು, ಸಂಘ ಸಂಸ್ಥೆಗಳು ನಮ್ಮ ವರಿಷ್ಠರ ಜತೆ ಚರ್ಚೆ ಮಾಡಿದ್ದಾರೆ. ಕೆಲವು ಸಂಘಟನೆ ಹಾಗೂ ಸಮಾಜಗಳಿಂದ ಈ ಜಾತಿ ಗಣತಿಗೆ ಅಪಸ್ವರ ಬಂದಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ನ್ಯಾಯಬದ್ಧವಾಗಿ ಅವಕಾಶ ಕಲ್ಪಿಸಿಕೊಡಬೇಕು ಎಂದು ವರಿಷ್ಠರು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಈ ಜಾತಿ ಗಣತಿಯಲ್ಲಿ ಯಾರನ್ನೂ ಬಿಡಬಾರದು, ಎಲ್ಲರನ್ನು ಒಳಗೊಳ್ಳಬೇಕು ಎಂದು ತೀರ್ಮಾನಿಸಲಾಗಿದೆ. ಯಾರ ಅಪಸ್ವರವೂ ಇಲ್ಲದಂತೆ ನೋಡಿಕೊಳ್ಳಲು ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಸಾಮಾಜಿಕ ನ್ಯಾಯದ ಬಗ್ಗೆ ಸರ್ಕಾರದ ಬದ್ಧತೆ ಇದೆ. ಜಾತಿ ಗಣತಿಯಲ್ಲಿ ಅಂಕಿ ಅಂಶಗಳ ಬಗ್ಗೆ ಅನೇಕ ಸಮಾಜಗಳು ಅಪಸ್ವರ ಎತ್ತಿದ್ದು, ಈ ಬಗ್ಗೆ ಎಲ್ಲರಿಗೂ ಸ್ಪಷ್ಟನೆ ನೀಡಲು ಅವಕಾಶ ಮಾಡಿಕೊಡಬೇಕು ಎಂದು ತೀರ್ಮಾನಿಸಲಾಗಿದೆ. ಸಾರ್ವಜನಿಕರು ನ್ಯಾಯಬದ್ಧವಾಗಿ ಯಾವ ಸಮಾಜಕ್ಕೆ ಸೇರಿದ್ದೀರಿ ಎಂಬುದನ್ನು ವ್ಯಕ್ತಪಡಿಸಿಕೊಳ್ಳಬೇಕು. ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು. ಸಮಾಜದ ಮುಖಂಡರು ಹಾಗೂ ಮಠಾಧೀಶರು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಳೆದ ಎರಡು ತಿಂಗಳಿನಿಂದ ಒಳಮೀಸಲಾತಿ ವಿಚಾರವಾಗಿ ಪರಿಶಿಷ್ಟ ಜಾತಿ ಅವರ ಜನಗಣತಿ ಮಾಡುತ್ತಿದ್ದೇವೆ. ಹೀಗಾಗಿ ಈ ಪ್ರಕ್ರಿಯೆ ಸುದೀರ್ಘವಾಗಿ ನಡೆಯುವುದರಿಂದ ಇದನ್ನು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ನಾವು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು. ಇದರಲ್ಲಿ ಯಾವುದೇ ಆತಂಕ ಬೇಡ.

ನಮ್ಮ ಈ ಪ್ರಯತ್ನದ ಮೂಲಕ ಜಾತಿಗಣತಿ ವಿಚಾರವಾಗಿ ಇರುವ ಅಪಸ್ವರವನ್ನು ಸರಿಪಡಿಸಲಾಗುವುದು. ನಮ್ಮ ರಾಜ್ಯದವರು ಎಲ್ಲೇ ಇದ್ದರೂ ಈ ಬಗ್ಗೆ ಆನ್ಲೈನ್ ಮೂಲಕ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗುವುದು” ಎಂದು ತಿಳಿಸಿದರು.

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಯಾಯಿತೇ ಎಂದು ಕೇಳಿದಾಗ, ಈ ವಿಚಾರವಾಗಿ ಚರ್ಚೆ ಮಾಡಲಾಯಿತು. ಈ ದುರ್ಘಟನೆಯನ್ನು ನಮ್ಮ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಬಗ್ಗೆ ವರಿಷ್ಠರಿಗೆ ಸಂಪೂರ್ಣ ಮಾಹಿತಿ ನೀಡಿ ಸತ್ಯಾಸತ್ಯತೆಯನ್ನು ವಿವರಿಸಿದ್ದೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್