ಬಾಗಲಕೋಟೆ: ಆಘಾತಕಾರಿ ಘಟನೆಯೊಂದರಲ್ಲಿ, ಬಾಗಲಕೋಟೆಯ ಜಿಲ್ಲಾಸ್ಪತ್ರೆಯಲ್ಲಿ ಅಪರಿಚಿತ ಮಹಿಳೆ ನವಜಾತ ಶಿಶುವನ್ನು ಕದ್ದೊಯ್ದ ಪ್ರಸಂಗ ನಡೆದಿದ್ದು, ಕೇವಲ 5 ಗಂಟೆಗಳಲ್ಲಿ ಪೊಲೀಸರು ಪತ್ತೆಹಚ್ಚಿ ಪಾಲಕರಿಗೆ ಹಸ್ತಾಂತರಿಸಿದ್ದಾರೆ.
ಆರೋಪಿ ಮಹಿಳೆ ನಿನ್ನೆ ನಸುಕಿನ ಜಾವ 4 ಗಂಟೆ ಸುಮಾರಿಗೆ ನರ್ಸ್ ಎಂದು ನಟಿಸಿ, ಶಿಶುವಿಗೆ ಉಸಿರಾಟದ ತೊಂದರೆ ಇದೆ ಎಂದು ಹೇಳಿ ನವಜಾತ ಶಿಶುವನ್ನು ಎತ್ತಿಕೊಂಡು ಆಸ್ಪತ್ರೆಯಿಂದ ಹೊರ ಹೋಗಿದ್ದಾಳೆ.
ಬಾಗಲಕೋಟೆ ನಿವಾಸಿ ತಾಯಿ ಮಾಬೂಬಿ ಶುಕ್ರವಾರ ಸಂಜೆ 7 ಗಂಟೆಗೆ ಮಗುವಿಗೆ ಜನ್ಮ ನೀಡಿದ್ದು, ಆಸ್ಪತ್ರೆಯ ಒಳಗಿನಿಂದ ನವಜಾತ ಶಿಶುವನ್ನು ಕಳೆದುಕೊಂಡು ತೀವ್ರ ದುಃಖಿತರಾಗಿದ್ದರು. ಆಸ್ಪತ್ರೆಗೆ ಭೇಟಿ ನೀಡಿದ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಪೋಷಕರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು.
ಹೆಚ್ಚುವರಿ ಎಸ್ಪಿ ಮಹಾಂತೇಶ್ವರ ಜಿಡ್ಡಿ ನೇತೃತ್ವದಲ್ಲಿ ಮೂರು ಪೊಲೀಸ್ ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದರು. ಶಿಶುವನ್ನು ಕಳುವು ಮಾಡಿದ ಆರೋಪಿತರನ್ನು ಬಂಧಿಸಲಾಗಿದೆ ಎಂದು ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.