ಬೆಂಗಳೂರು: ಹೈಕೋರ್ಟ್ ಆದೇಶದ ನಂತರವೂ ಸೋಮವಾರ ಟ್ಯಾಕ್ಸಿ ಸೇವೆ ನೀಡುತ್ತಿದ್ದ ಬೈಕ್ ಸವಾರರ ವಿರುದ್ಧ ಕ್ರಮ ಕೈಗೊಂಡಿರುವ ಸಾರಿಗೆ ಇಲಾಖೆ, 103 ಬೈಕ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ.
ರಾಜ್ಯದ ಸಾರಿಗೆ ನಿಯಮಗಳ ಅಡಿಯಲ್ಲಿ ಬೈಕ್ ಟ್ಯಾಕ್ಸಿ, ವೈಟ್ ಬೋರ್ಡ್ ವಾಹನಗಳ ಮೂಲಕ ಟ್ಯಾಕ್ಸಿ ಸೇವೆ ನೀಡುವಂತಿಲ್ಲ. ಬೈಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಯಾವುದೇ ನಿಯಮ ರೂಪುಗೊಂಡಿಲ್ಲ. ಆದರೂ, ಒಲಾ, ಉಬರ್, ರ್ಯಾಪಿಡೋ ಸೇರಿದಂತೆ ಇನ್ನಿತರ ಸಂಸ್ಥೆಗಳು ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದವು.
ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆದು, ಜೂನ್ 15ರ ನಂತರ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿತ್ತು.
ಆ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ನಗರದ ವಿವಿಧ ಭಾಗಗಳಲ್ಲಿ ತಪಾಸಣೆ ನಡೆಸಿದ ವೇಳೆ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದ 103 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಎಲ್ಲ 103 ಬೈಕ್‌ಗಳ ವಿರುದ್ಧ ಪ್ರಕರಣ ದಾಖಲಿಸಿ ತಲಾ 5 ಸಾವಿರ ರು. ದಂಡ ವಿಧಿಸಿದ್ದಾರೆ.
ಬೆಂಗಳೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿ 16 ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿದ್ದರೆ, ಕೆಆರ್ ಪುರಂನಲ್ಲಿ13 ಪ್ರಕರಣ ಮತ್ತು ಬೆಂಗಳೂರು ಪೂರ್ವ ಆರ್‌ಟಿಒ ಅಧಿಕಾರಿಗಳು 12 ಪ್ರಕರಣಗಳನ್ನು ದಾಖಲಿಸಿದ್ದಾರೆ.
ನಿಷೇಧ ಹಿನ್ನೆಲೆಯಲ್ಲಿ ಒಲಾ, ಉಬರ್, ರ್ಯಾಪಿಡೋ ಸೇರಿ ಎಲ್ಲ ಅಗ್ರಿ ಗೇಟರ್‌ಗಳು ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಆ್ಯಪ್‌ಗಳಲ್ಲೂ ಬೈಕ್ ಟ್ಯಾಕ್ಸಿಸೇವೆ ಆಯ್ಕೆ ತೆಗೆದು ಹಾಕಿದೆ. ಆದರೆ, ಒಲಾ, ಉಬರ್, ಕ್ಯಾಪಿಡೋ ಸಂಸ್ಥೆಗಳು ಬೈಕ್ ಪಾರ್ಸೆಲ್ ಸೇವೆ ಆರಂಭಿಸಿವೆ.
ಗ್ರಾಹಕರಿಗೆ ಟ್ಯಾಕ್ಸಿ ಸೇವೆಯ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಿಸುವ ಸೇವೆ ನೀಡಲಾಗುತ್ತದೆ. ಆದರೆ, ಈ ಸೇವೆಯ ಮೂಲಕವೇ ಬೈಕ್ ಸವಾರರು ಟ್ಯಾಕ್ಸಿ ಸೇವೆ ನೀಡುತ್ತಿರುವುದು ಸೋಮವಾರ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪಾರ್ಸೆಲ್ ಸೇವೆ ಹೆಸರಿನಲ್ಲಿ ಟ್ಯಾಕ್ಸಿ ಸೇವೆ ನೀಡುವವರ ವಿರುದ್ಧ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.
ಸಾರಿಗೆ ಆಯುಕ್ತ ಯೋಗೀಶ್ ಅವರು ಮಾತನಾಡಿ, ಬೈಕ್ ಟ್ಯಾಕ್ಸಿ ನಿರ್ವಾಹಕರು ಹೈಕೋರ್ಟ್ ನಿಷೇಧವನ್ನು ಪಾಲಿಸಬೇಕು, ಇಲ್ಲದಿದ್ದರೆ ಕಠಿಣಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಓಲಾ ಉಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಮಾತನಾಡಿ, ಬೈಕ್ ಟ್ಯಾಕ್ಸಿ ನಿಷೇಧ ಸ್ವಾಗತಾರ್ಹ. ಆದಾಗ್ಯೂ, ಕೆಲವು ಬೈಕ್ ಟ್ಯಾಕ್ಸಿ ನಿರ್ವಾಹಕರು ಸೇವೆಗಳನ್ನು ನಡೆಸುತ್ತಿರುವುದು ಕಂಡುಬರುತ್ತದೆ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ.
ಉಬರ್ ಸಂಸ್ಥೆಯ ವಕ್ತಾರರು ಪ್ರತಿಕ್ರಿಯಿಸಿ, ಹೈಕೋರ್ಟ್ ಆದೇಶದ ನಂತರ ಜೂನ್ 16 ರಿಂದ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವ ಕಠಿಣ ನಿರ್ಧಾರವನ್ನು ಉಬರ್ ತೆಗೆದುಕೊಂಡಿದೆ. ಇದು ತಮ್ಮ ದೈನಂದಿನ ಚಲನಶೀಲತೆಯ ಅಗತ್ಯಗಳಿಗಾಗಿ ಬೈಕ್ ಟ್ಯಾಕ್ಸಿಗಳನ್ನೇ ಅವಲಂಬಿಸಿರುವವರ ಮೇಲೆ ಮತ್ತು ಅವರ ಜೀವನೋಪಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಎಲ್ಲರಿಗೂ ಸುರಕ್ಷಿತ ಮತ್ತು ಕೈಗೆಟುಕುವ ಚಲನಶೀಲತೆಯ ಆಯ್ಕೆಗಳನ್ನು ಸಕ್ರಿಯಗೊಳಿಸುವ ಪ್ರಗತಿಪರ ನೀತಿ ಚೌಕಟ್ಟನ್ನು ರೂಪಿಸಲು ನಾವು ರಾಜ್ಯ ಸರ್ಕಾರದೊಂದಿಗೆ ನಿಲ್ಲುತ್ತೇವೆಂದು ಹೇಳಿದ್ದಾರೆ.