ಕಾಂಗ್ರೆಸ್ ಮಾಜಿ ಶಾಸಕ ಕಾಕಾ ಸಾಹೇಬ್ ಪಾಟೀಲ್ ನಿಧನ; ಗಣ್ಯರಿಂದ ಸಂತಾಪ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ಗಣ್ಯರು, ಅವರ ರಾಜಕೀಯ ಮಿತ್ರರು ಸಂತಾಪ ಸೂಚಿಸಿದ್ದಾರೆ.
ಬೆಳಗಾವಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಿಪ್ಪಾಣಿ ಕ್ಷೇತ್ರದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ಕಾಕಾ ಸಾಹೇಬ್ ಪಾಟೀಲ್ ಅವರು ಬುಧವಾರ ನಿಧನರಾಗಿದ್ದಾರೆ.
ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಕಾ ಸಾಹೇಬ್ ಪಾಟೀಲ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
70 ವರ್ಷದ ಕಾಕಾ ಸಾಹೇಬ್ ಪಾಟೀಲ್ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ರಾಜ್ಯ ಕಾಂಗ್ರೆಸ್ನ ಹಿರಿಯ ರಾಜಕಾರಣಿ ಕಾಕಾ ಸಾಹೇಬ್ ಪಾಟೀಲ್ ನಿಧನ ಸುದ್ದಿ ಕೇಳಿ ಕಾರ್ಯಕರ್ತರು ಆಘಾತಗೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ಗಣ್ಯರು, ಅವರ ರಾಜಕೀಯ ಮಿತ್ರರು ಸಂತಾಪ ಸೂಚಿಸಿದ್ದಾರೆ.
ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಹಿರಿಯ ನಾಯಕರಾಗಿದ್ದ ಕಾಕಾಸಾಹೇಬ್ ಪಾಟೀಲ ಅವರ ನಿಧನ ದುಃಖವುಂಟುಮಾಡಿದೆ. ನೇರ ನಡೆ ನುಡಿ, ಜನಪರ ಕಾಳಜಿಯ ಮುತ್ಸದ್ದಿ ನಾಯಕನ ಅಗಲಿಕೆಯಿಂದ ರಾಜಕೀಯ ರಂಗ ಮಾತ್ರವಲ್ಲ, ಇಡೀ ಸಮಾಜ ಬಡವಾಗಿದೆ.
ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಕಾ ಸಾಹೇಬ್ ಪಾಟೀಲ್ ಅವರು 1999 ರಿಂದ 2013ರ ವರೆಗೆ ಸತತ ಚುನಾವಣೆಯಲ್ಲಿ ಗೆಲ್ಲುವ ಮೂಲಕ ನಿಪ್ಪಾಣಿ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿದ್ದರು. ಕಾಕಾ ಸಾಹೇಬ್ ಪಾಟೀಲ್ ಸಜ್ಜನ ರಾಜಕಾರಣಿ ಆಗಿದ್ದು, ನಿಪ್ಪಾಣಿಯಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು ಹೊಂದಿದ್ದರು.