ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವ್ಯಾಪ್ತಿಯಲ್ಲಿ 8 ವರ್ಷಗಳ ಬಳಿಕ ಬೃಹತ್ ನೇಮಕಾತಿ ನಡೆದಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬುಧವಾರ ಚಾಲಕ ಕಂ ನಿರ್ವಾಹಕರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಇಲಾಖೆಯ ವತಿಯಿಂದ ನೇಮಕಾತಿ ಪತ್ರಗಳನ್ನು ವಿತರಣೆ ಮಾಡಿದೆ. ಒಟ್ಟು 2000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ ಮಾಡಲಾಗಿದೆ.
ಬೆಂಗಳೂರಿನ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು, ಮೊದಲ 51 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಣೆ ಮಾಡಿ ಶುಭ ಕೋರಿದರು.
ಬಳಿಕ ಮಾತನಾಡಿದ ಅವರು, ನೇಮಕಗೊಂಡ 2000 ಚಾಲಕ-ಕಂ- ನಿರ್ವಾಹಕ ಅಭ್ಯರ್ಥಿಗಳ ನೇಮಕಾತಿಯು ಪಾರದರ್ಶಕವಾಗಿ ಮಾಡಲಾಗಿದೆ. ಇದರಲ್ಲಿ ಯಾರದ್ದೇ ಹಸ್ತಕ್ಷೇಪವಿಲ್ಲ. ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆಗೊಳಿಸಲಾಗಿದೆ ಎಂದು ಹೇಳಿದರು.
ಹೊಸದಾಗಿ ನೇಮಕಗೊಂಡ ಸಿಬ್ಬಂದಿ ಸಂಸ್ಥೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು ಹಾಗೂ ಮಹಿಳಾ ಪ್ರಯಾಣಿಕರೊಂದಿಗೆ, ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದೂ ಸಲಹೆ ನೀಡಿದರು.
ಇದಲ್ಲದೆ, ಅಪಘಾತ ಸಂಭವಿಸದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ. ನಿಗಮವು ಕೊರೋನಾ ನಂತರ ಹಲವು ಅಡೆತಡೆಗಳನ್ನು ಎದುರಿಸಿಕೊಂಡು ಆರ್ಥಿಕವಾಗಿ ಯಶಸ್ಸಿನ ಮಾರ್ಗವನ್ನು ನೋಡುತ್ತಿದೆ. ಹಲವಾರು ಕಾರ್ಮಿಕ ಸ್ನೇಹಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ನೌಕರರು ಹಾಗೂ ಅವರ ಅವಲಂಬಿತರಿಗೆ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
4 ಸಾರಿಗೆ ನಿಗಮಗಳಿಂದ 1000 ಕ್ಕೂ ಹೆಚ್ಚು ಮೃತರ ಅವಲಂಬಿತರಿಗೆ ನೌಕರಿಯನ್ನು ನೀಡಿದ್ದು, ಸುಮಾರು 9000 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಈಗಾಗಲೇ 7500 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಂಡಿದೆ. ಅಪಘಾತದಿಂದ ಮೃತಪಟ್ಟ ಚಾಲನಾ ಸಿಬ್ಬಂದಿಗಳ ಕುಟುಂಬವನ್ನು ಆರ್ಥಿಕವಾಗಿ ಸಧೃಡಗೊಳಿಸುವ ಸಲುವಾಗಿ 1 ಕೋಟಿ ರೂ. ವಿಮಾ ಯೋಜನೆ, ಸ್ವಾಭಾವಿಕವಾಗಿ ಮೃತಪಟ್ಟ ಚಾಲನಾ ಸಿಬ್ಬಂದಿಗಳ ಕುಟುಂಬಕ್ಕೆ 10 ಲಕ್ಷ ರೂ.ಗಳನ್ನು ಕಟುಂಬ ಕಲ್ಯಾಣ ಯೋಜನೆ ಅಡಿ ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.