ಬೆಂಗಳೂರು: ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆ ಬದಲು 10 ಗಂಟೆಗೆ ವಿಸ್ತರಿಸುವ ಸಂಬಂಧ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಗುರುವಾರ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತಿದ್ದುಪಡಿ ಕಾನೂನು ಬಗ್ಗೆ ನೋಂದಾಯಿತ ಕಾರ್ಮಿಕ ಸಂಘಟನೆಗಳು ಮತ್ತು ಉದ್ದಿಮೆದಾರರ ಜೊತೆ ಬುಧವಾರ ಸಭೆ ನಡೆಸಲಾಗಿದೆ. ಈ ಪ್ರಸ್ತಾವನೆ ಸಾರ್ವಜನಿಕರು ಹಾಗೂ ಉದ್ಯೋಗಿಗಳಲ್ಲಿ ತಪ್ಪು ತಿಳುವಳಿಕೆ, ಭೀತಿಗೆ ಕಾರಣವಾಗಿದೆ. ಹೀಗಾಗಿ ಸ್ಪಷ್ಟೀಕರಣ ನೀಡಬೇಕಾಗಿದೆ ಎಂದು ಹೇಳಿದರು.
ಕೆಲಸದ ಸಮಯವನ್ನು ಹೆಚ್ಚಿಸುವ ಪ್ರಸ್ತಾವಿತ ತಿದ್ದುಪಡಿಯು ಗರಿಷ್ಠ ವಾರದ ಕೆಲಸದ ಸಮಯವನ್ನು ಬದಲಾಯಿಸುವುದಿಲ್ಲ, ಅದು 48 ಗಂಟೆಗಳ ಮಿತಿಯಲ್ಲಿಯೇ ಉಳಿಯುತ್ತದೆ. ನಿರ್ಧಾರವು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಮತ್ತು ಮೂಲಭೂತ ದೇಶೀಯ ಕಾನೂನುಗಳು ನಿಗದಿಪಡಿಸಿದ ಮಾನದಂಡಗಳಿಗೆ ಸಂಪೂರ್ಣವಾಗಿ ಅನುಗುಣವಾಗಿದೆ. ಯಾವುದೇ ಅಂತರರಾಷ್ಟ್ರೀಯ ಸಮಾವೇಶ ಅಥವಾ ಮಾನದಂಡದ ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದರು,
ಪ್ರಸಕ್ತ ಕಾನೂನಿನಡಿ ಕೆಲಸದ ಅವಧಿ 9 ತಾಸು ಇದೆ. ಹೊಸ ಪ್ರಸ್ತಾವನೆಯಂತೆ ದಿನದ ಕೆಲಸದ ಅವಧಿಯನ್ನು 10 ತಾಸಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಈ 10 ತಾಸುಗಳ ಕೆಲಸದ ಅವಧಿಯಲ್ಲಿ ಒಂದು ತಾಸಿನ ಭೋಜನ ವಿರಾಮವೂ ಸೇರಿದೆ. ಆ ಮೂಲಕ ಕೆಲಸ ಮಾಡುವ ಅವಧಿ 9 ತಾಸು ಮಾತ್ರ ಉಳಿಯಲಿದೆ. ಪ್ರಸ್ತಾವನೆಯ ಮೂಲ ಉದ್ದೇಶ ಉದ್ಯೋಗಿಗಳು, ಉದ್ಯೋಗದಾತ ಇಬ್ಬರಿಗೂ ಆಯ್ಕೆಗಳನ್ನು ನೀಡುವುದಾಗಿದೆ. ಈ ಬದಲಾವಣೆ ಮೂಲಕ ಕಾನೂನು ಪ್ರಕಾರ ಕೆಲ ದಿನಗಳಲ್ಲಿ ಉದ್ಯೋಗಿ ವಾರದಲ್ಲಿ 48 ತಾಸು ಕೆಲಸ ಮಾಡುವ ಅಗತ್ಯತೆಯನ್ನೂ ಪೂರೈಸುವ ವ್ಯವಸ್ಥೆ ಕಲ್ಪಿಸಲಿದೆ. ರಾಜ್ಯ ಸರ್ಕಾರ ಎಲ್ಲಾ ಸಿಬ್ಬಂದಿ ವರ್ಗದ ಹಿತರಕ್ಷಣೆಗೆ ಬದ್ಧವಾಗಿದೆ ಎಂದಿದ್ದಾರೆ.
ಸದ್ಯ ಪ್ರಸ್ತಾವನೆ ಸಮಾಲೋಚನೆ ಹಂತದಲ್ಲಿದೆ. ಎಲ್ಲಾ ಪಾಲುದಾರರ ಜೊತೆ ಸಮಗ್ರ ಚರ್ಚೆ ನಡೆಸಲಾಗುತ್ತಿದೆ. ಯಾವುದೇ ಅಂತಿಮ ತೀರ್ಮಾನಕ್ಕೆ ಬರುವ ಮೊದಲು ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.