ನವದೆಹಲಿ: ತೀವ್ರ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಕರ್ನಾಟಕ ಮಾವು ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದ್ದು, ರೈತರಿಂದ ಸುಮಾರು 2.5 ಲಕ್ಷ ಟನ್ ಮಾವು ಖರೀದಿಗೆ ಮುಂದಾಗಿದೆ.
ಹೌದು.. ಬೆಲೆಗಳಲ್ಲಿ ತೀವ್ರ ಕುಸಿತದ ನಡುವೆಯೂ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯಡಿಯಲ್ಲಿ 2025-26ನೇ ಸಾಲಿಗೆ ಕರ್ನಾಟಕದಿಂದ ಕ್ವಿಂಟಾಲ್‌ಗೆ 1,616 ರೂ.ಗಳಂತೆ 2.5 ಲಕ್ಷ ಟನ್ ಮಾವನ್ನು ಖರೀದಿಸುವುದಾಗಿ ಕೇಂದ್ರ ಮಂಗಳವಾರ ಘೋಷಿಸಿದೆ. ಕೇಂದ್ರ ಕೃಷಿ ಸಚಿವಾಲಯ ಜಾರಿಗೆ ತಂದ ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯ ಮೂಲಕ ಖರೀದಿಯನ್ನು ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ತಮ್ಮ ತವರು ರಾಜ್ಯದಲ್ಲಿ ಮಾವು ಬೆಳೆಗಾರರ ಬಗ್ಗೆ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಕಳವಳ ವ್ಯಕ್ತಪಡಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
"ಕರ್ನಾಟಕ ರಾಜ್ಯದಲ್ಲಿ 2025-26ರ ಮಾರುಕಟ್ಟೆ ವರ್ಷಕ್ಕೆ ಮಾವಿನ ಮೇಲಿನ ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯಡಿಯಲ್ಲಿ, ಕ್ವಿಂಟಾಲ್‌ಗೆ 1,616 ರೂ.ಗಳಂತೆ ಗರಿಷ್ಠ 2,50,000 ಟನ್ ಮಾವನ್ನು ಅನುಮೋದಿಸಲಾಗಿದೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ" ಎಂದು ಚೌಹಾಣ್ ಕುಮಾರಸ್ವಾಮಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಈ ಕ್ರಮವು ರಾಜ್ಯದಲ್ಲಿ ಮಾವಿನ ಬೆಳೆಗಾರರಿಗೆ ಪರಿಹಾರ ನೀಡುತ್ತದೆ ಎಂದು ಕೃಷಿ ಸಚಿವರು ಭರವಸೆ ವ್ಯಕ್ತಪಡಿಸಿದರು, ಏಕೆಂದರೆ ಅಲ್ಲಿ ಬೆಲೆಗಳು ತೀವ್ರವಾಗಿ ಕುಸಿದು ಕ್ವಿಂಟಲ್‌ಗೆ 400 ರೂ.ಗಳಿಗೆ ತಲುಪಿವೆ. ಇದು ಖರೀದಿ ಬೆಲೆಗಿಂತ ನಾಲ್ಕು ಪಟ್ಟು ವ್ಯತ್ಯಾಸವಾಗಿದೆ.
ಪ್ರಧಾನಿ ಮೋದಿಗೆ ಎಚ್ ಡಿಕೆ ಧನ್ಯವಾದ
ಇನ್ನು ಸಂಕಷ್ಟದಲ್ಲಿದ್ದ ಕರ್ನಾಟಕ ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಧನ್ಯವಾದ ಹೇಳಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಟ್ಟೀಟ್ ಮಾಡಿರುವ ಎಚ್ ಡಿಕೆ, 'ಕರ್ನಾಟಕದ ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಸರಕಾರದ ರೈತಪರ ಬದ್ಧತೆ, ಅಚಲತೆಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.
ಅಂತೆಯೇ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರಾಜ್ಯದ ಮಾವು ಬೆಳೆಗಾರರ ಹಿತದೃಷ್ಟಿಯಿಂದ ಮನವಿ ಮಾಡಿದ ತಕ್ಷಣವೇ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆ (Market Intervention Scheme-MIS) ಅಡಿಯಲ್ಲಿ ಬೆಂಬಲ ಬೆಲೆ ಘೋಷಿಸಿದ್ದಕ್ಕಾಗಿ ಕೇಂದ್ರದ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹ್ವಾಣ್ ಅವರಿಗೆ ಕರ್ನಾಟಕದ ಮಾವು ಬೆಳೆಗಾರರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನರೇಂದ್ರ ಮೋದಿ ಅವರ ಆಡಳಿತದಲ್ಲಿ ರೈತರ ಉತ್ಪನ್ನಗಳಿಗೆ ಸ್ಥಿರ ಬೆಲೆಯ ಖಾತರಿ ಸದಾ ಇರುತ್ತದೆ ಎಂಬುದನ್ನು ಈ ಉಪಕ್ರಮವು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.