ನಿರ್ಮಲಾ ಸೀತಾರಾಮನ್ - ಸಿದ್ದರಾಮಯ್ಯ 
ರಾಜ್ಯ

ಸಿಎಂ ಸಿದ್ದರಾಮಯ್ಯರಿಂದ ಸೀತಾರಾಮನ್ ಭೇಟಿ; ತೆರಿಗೆ ಹಂಚಿಕೆ ಕುರಿತು ಚರ್ಚೆ

15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಗಮನಾರ್ಹ ನಷ್ಟವಾಗಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸೀತಾರಾಮನ್ ಅವರಿಗೆ ವಿವರಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, 16ನೇ ಹಣಕಾಸು ಆಯೋಗದಿಂದ ರಾಜ್ಯಗಳಿಗೆ ತೆರಿಗೆ ಹಂಚಿಕೆ ಕುರಿತು ಚರ್ಚಿಸಿದರು.

ಸಭೆಯಲ್ಲಿ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಗಮನಾರ್ಹ ನಷ್ಟವಾಗಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸೀತಾರಾಮನ್ ಅವರಿಗೆ ವಿವರಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

15ನೆ ಹಣಕಾಸು ಆಯೋಗವು ತನ್ನ ಶಿಫಾರಸ್ಸಿನಲ್ಲಿ ಕರ್ನಾಟಕದ ತೆರಿಗೆ ಪಾಲನ್ನು ಶೇ.4.713 ರಿಂದ ಶೇ.3.647ಕ್ಕೆ ಇಳಿಕೆ ಮಾಡಿದ್ದರಿಂದ ರಾಜ್ಯದ ತೆರಿಗೆ ಪಾಲು 14ನೆ ಹಣಕಾಸು ಆಯೋಗಕ್ಕೆ ಹೋಲಿಸಿದರೆ, 15ನೆ ಹಣಕಾಸು ಆಯೋಗದ ಅವಧಿಯಲ್ಲಿ ಶೇ.23ರಷ್ಟು ಕಡಿಮೆಯಾಗಿದೆ ಎಂದು ಸಿಎಂ ವಿವರಿಸಿದ್ದಾರೆ.

ಕರ್ನಾಟಕಕ್ಕೆ ವಿಶೇಷ ಅನುದಾನಗಳಲ್ಲೂ 11,495 ಕೋಟಿ ರೂ. ನಿರಾಕರಿಸಲಾಗಿದೆ. ವಿಶೇಷ ಅನುದಾನವು ಸಿಗದ ಕಾರಣ, ಒಟ್ಟಾರೆಯಾಗಿ 15ನೆ ಹಣಕಾಸು ಆಯೋಗದ ಅವಧಿಯಲ್ಲಿ ಒಟ್ಟು 80 ಸಾವಿರ ಕೋಟಿ ರೂ. ರಾಜ್ಯಕ್ಕೆ ನಷ್ಟವಾಗಿದೆ. 15ನೆ ಹಣಕಾಸು ಆಯೋಗವು ರಾಜ್ಯಗಳ ನಡುವೆ ತೆರಿಗೆ ಹಂಚಿಕೆಯ ಸೂತ್ರವನ್ನು ಲೆಕ್ಕ ಮಾಡಲು ಆದಾಯ-ದೂರ (income-distance) ಮಾನದಂಡದ ಮೇಲೆ ಅತಿಯಾಗಿ ಅವಲಂಬಿಸಿದ ಕಾರಣ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ನಷ್ಟವಾಯಿತು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಆದಾಯ-ದೂರ ಮಾನದಂಡವನ್ನು ಶೇಕಡಾ 20 ರಷ್ಟು ಕಡಿಮೆ ಮಾಡಿ ಅದನ್ನು ರಾಷ್ಟ್ರೀಯ ಜಿಡಿಪಿಯಲ್ಲಿ ರಾಜ್ಯದ ಪಾಲು ಆಗಿರುವ ಹಣಕಾಸಿನ ಕೊಡುಗೆಗೆ ಮರುಹಂಚಿಕೆ ಮಾಡುವಂತೆ ಕರ್ನಾಟಕ 16ನೇ ಹಣಕಾಸು ಆಯೋಗವನ್ನು ಕೋರಿದೆ.

ಹಣಕಾಸು ಆಯೋಗವು ಶಿಫಾರಸ್ಸು ಮಾಡುವ ರಾಜಸ್ವ ಕೊರತೆ ಅನುದಾನಗಳನ್ನು ನಿಲ್ಲಿಸಲು ನಾವು ವಿನಂತಿಸಿದ್ದೇವೆ. ಏಕೆಂದರೆ, ಅವು ವಿತ್ತೀಯ ಹೊಣೆಗಾರಿಕೆ ಅಧಿನಿಯಮದ(ಎಫ್‍ಆರ್‍ಬಿಎಂ) ಚೌಕಟ್ಟಿನಲ್ಲಿ ಪ್ರಸ್ತಾಪಿಸಲಾದ ಆರ್ಥಿಕ ಶಿಸ್ತಿನ ತತ್ವಗಳಿಗೆ ವಿರುದ್ಧವಾಗಿವೆ. 15ನೆ ಹಣಕಾಸು ಆಯೋಗವು, ಒಟ್ಟು ಕೇಂದ್ರ ಸ್ವೀಕೃತಿಗಳ ಶೇ.1.92ರಷ್ಟನ್ನು ರಾಜಸ್ವ ಕೊರತೆ ಅನುದಾಗಳೆಂದು ಶಿಫಾರಸ್ಸು ಮಾಡಿತ್ತು. ಆದುದರಿಂದ, ಕೇಂದ್ರ ಸರಕಾರದ ಒಟ್ಟು ಸ್ವೀಕೃತಿಗಳ ಶೇ.1.92ರಷ್ಟು ಮೊತ್ತವನ್ನು ತೆರಿಗೆ ಹಂಚಿಕೆಯ ಸೂತ್ರದ ಆಧಾರದ ಮೇಲೆ ಎಲ್ಲ ರಾಜ್ಯಗಳಿಗೂ ಹಂಚಿಕೆ ಮಾಡಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.

ಬೆಂಗಳೂರು, ಕಲ್ಯಾಣ ಕರ್ನಾಟಕ ಮತ್ತು ಮಲೆನಾಡು ಪ್ರದೇಶದ ಅಭಿವೃದ್ಧಿ ಸವಾಲುಗಳನ್ನು ಸಹ ಪ್ರಸ್ತಾಪಿಸಿ, ರಾಜ್ಯಗಳ ಬೆಳವಣಿಗೆಯನ್ನು ಉತ್ತೇಜಿಸಲು ನ್ಯಾಯಯುತ ಮತ್ತು ಬೆಳವಣಿಗೆಗೆ ಪೂರಕವಾಗುವ ತೆರಿಗೆ ಹಂಚಿಕೆಯ ಅವಶ್ಯಕತೆಯನ್ನು ವಿತ್ತಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಕರ್ನಾಟಕದ ಪ್ರಸ್ತಾವನೆಗಳು ವಿಶೇಷ ಪ್ರಕರಣವೆಂದು ಪರಿಗಣಿಸದೆ, ಇದು ಒಟ್ಟಾರೆ ರಾಷ್ಟ್ರೀಯ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಪ್ರಸ್ತಾವನೆಗಳಾಗಿವೆ ಎಂದು ಪರಿಗಣಿಸಬೇಕು.

16ನೇ ಹಣಕಾಸು ಆಯೋಗಕ್ಕೆ ಕೇಂದ್ರ ಸರ್ಕಾರ ಸಲ್ಲಿಸುವ ಜ್ಞಾಪಕ ಪತ್ರದಲ್ಲಿ ರಾಜ್ಯ ಸರ್ಕಾರದ ಈ ಪ್ರಸ್ತಾವನೆಗಳನ್ನು ಸೇರಿಸುವಂತೆ ಮನವಿ ಮಾಡಲಾಗಿದ್ದು, ಎಲ್ಲಾ ರಾಜ್ಯಗಳು ದೇಶದ ಅಭಿವೃದ್ಧಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಬೆಳವಣಿಗೆ ಆಧಾರಿತ ತೆರಿಗೆ ಹಂಚಿಕೆ ಅವಶ್ಯಕ ಎಂಬುದನ್ನು ಕೇಂದ್ರ ಹಣಕಾಸು ಸಚಿವರಿಗೆ ತಿಳಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ

ಸದ್ದಿಲ್ಲದೆ ಹಸೆಮಣೆ ಏರಲು ಸಜ್ಜಾದ ಚಿಕ್ಕಣ್ಣ: ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ; ಹಾಸ್ಯನಟನ ಕೈ ಹಿಡಿಯೋ ಹುಡುಗಿ ಯಾರು?

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

SCROLL FOR NEXT