ನವದೆಹಲಿ: ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ಕಳೆದ ಬುಧವಾರ ಬೆಂಗಳೂರು ಸೇರಿದಂತೆ ರಾಜ್ಯದ 17 ಕಡೆ ದಾಳಿ ನಡೆಸಿದ್ದರು.
ಬೆಂಗಳೂರಿನ ಮೂರು ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್ ಕೋಟಾದ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ನಗದು ರೂಪದಲ್ಲಿ ಹಣ ಪಡೆದು ಸೀಟ್ ಹಂಚಿಕೆ ಮಾಡುತ್ತಿವೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ಆರೋಪಿಸಿದೆ.
"ಸೀಟ್ ಬ್ಲಾಕಿಂಗ್ ದಂಧೆ" ಪ್ರಕರಣ ಸಂಬಂಧ ಜೂನ್ 25-26 ರಂದು ರಾಜ್ಯದ 17 ಸ್ಥಳಗಳಲ್ಲಿ ಶೋಧ ನಡೆಸಿದ ನಂತರ ಕೇಂದ್ರ ತನಿಖಾ ಸಂಸ್ಥೆಯ ಹೇಳಿಕೆ ಬಂದಿದೆ.
ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಆಕಾಶ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ಹಾಗೂ ನ್ಯೂ ಹಾರಿಜಾನ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮೇಲೆ ದಾಳಿ ನಡೆಸಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್‌ಗಳನ್ನು ಬ್ಲಾಕ್ ಮಾಡಿ ಅಕ್ರಮವಾಗಿ ಹಂಚಿಕೆ ಮಾಡುತ್ತಿದ್ದ ಸಂಬಂಧ ಕಳೆದ ವರ್ಷ ಬೆಂಗಳೂರಿನ ಮಲ್ಲೇಶ್ವರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕಿಂಗ್‌ಪಿನ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಈ ಸಂಬಂಧ ಕಾಲೇಜುಗಳ ವಿರುದ್ಧ ಕೆಇಎ(ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ನೀಡಿದ ದೂರಿನ ಆಧಾರದ ಮೇಲೆ ಕರ್ನಾಟಕ ಪೊಲೀಸರು ದಾಖಲಿಸಿದ ಎಫ್‌ಐಆರ್ ಮೇಲೆ ಇಡಿ ಪ್ರಕರಣ ದಾಖಲಿಸಿದೆ.
ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಹಣದ ಅಕ್ರಮ ವರ್ಗಾವಣೆ ಶಂಕೆ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ ಎಂಜಿನಿಯರಿಂಗ್ ಕಾಲೇಜುಗಳ ಮೇಲೆ ನಸುಕಿನಲ್ಲೇ ದಾಳಿ ಮಾಡಿದ ಅಧಿಕಾರಿಗಳು, ಇಡೀ ದಿನ ದಾಖಲೆಗಳನ್ನು ಪರಿಶೀಲಿಸಿದರು. ಸೀಟ್‌ಗಳ ಅಕ್ರಮ ಹಂಚಿಕೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.