ಸಚಿವ ಪ್ರಿಯಾಂಕ್ ಖರ್ಗೆ  
ರಾಜ್ಯ

ಕೊಲ್ಹಾಪುರಿ ಚಪ್ಪಲಿ ತಯಾರಿಸುವ ಬಹುತೇಕ ಮಂದಿ ಕರ್ನಾಟಕದವರು, ಈ ಕುಶಲಕರ್ಮಿಗಳ ಕಡೆಗಣಿಸಬಾರದು: ಸಚಿವ ಪ್ರಿಯಾಂಕ್ ಖರ್ಗೆ

ಕೊಲ್ಹಾಪುರಿ ಚಪ್ಪಲಿಗಳನ್ನು ತಯಾರಿಸುವ ಹೆಚ್ಚಿನ ಕುಶಲಕರ್ಮಿಗಳು ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಮತ್ತು ಧಾರವಾಡದ ಅಥಣಿ, ನಿಪ್ಪಾಣಿ, ಚಿಕ್ಕೋಡಿ, ರಾಯಬಗ್ ಮತ್ತಿತರ ಭಾಗಗಲ್ಲಿ ವಾಸಿಸುತ್ತಿದ್ದಾರೆ.

ಬೆಂಗಳೂರು: ಮಹಾರಾಷ್ಟ್ರದ ವೈಶಿಷ್ಟ್ಯವೆಂದು ಪರಿಗಣಿಸಲಾದ ಕೊಲ್ಹಾಪುರಿ ಚಪ್ಪಲಿಯನ್ನು ವಿಶ್ವಖ್ಯಾತ ಫ್ಯಾಷನ್ ಸಂಸ್ಥೆ ಪ್ರಾಡ 1.2 ಲಕ್ಷ ರೂ ಬೆಲೆಗೆ ಮಾರಾಟ ಮಾಡುತ್ತಿದೆ ಎನ್ನುವ ಸುದ್ದಿ ಇದೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ದೊರೆಯುವ ಈ ಚಪ್ಪಲಿ ತಯಾರಿಕೆಯಲ್ಲಿ ಕರ್ನಾಟಕದವರ ಪಾತ್ರವೂ ದೊಡ್ಡದಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದು, ಈ ಕುಶಲಕರ್ಮಿಗಳನ್ನು ಕಡೆಗಣಿಸಬಾರದು ಎಂದು ಹೇಳಿದ್ದಾರೆ.

ಇದೇ ವೇಳೆ ಕೊಲ್ಹಾಪುರಿ ಚಪ್ಪಲಿಗೆ ಕರ್ನಾಟಕದ ಕುಶಲಕರ್ಮಿಗಳಿಗೂ ಜಿಐ ಟ್ಯಾಗ್ ಪಡೆಯಲು ಹೇಗೆ ಹೋರಾಟ ಮಾಡಲಾಯಿತು ಎನ್ನುವುದನ್ನೂ ಸಚಿವರು ವಿವರಿಸಿದ್ದಾರೆ.

ಕೊಲ್ಹಾಪುರಿ ಚಪ್ಪಲಿಗಳನ್ನು ತಯಾರಿಸುವ ಹೆಚ್ಚಿನ ಕುಶಲಕರ್ಮಿಗಳು ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಮತ್ತು ಧಾರವಾಡದ ಅಥಣಿ, ನಿಪ್ಪಾಣಿ, ಚಿಕ್ಕೋಡಿ, ರಾಯಬಗ್ ಮತ್ತಿತರ ಭಾಗಗಲ್ಲಿ ವಾಸಿಸುತ್ತಿದ್ದಾರೆ. ತಲೆತಲೆಮಾರುಗಳಿಂದ ಇವರು ಈ ಚಪ್ಪಲಿಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಕೊಲ್ಹಾಪುರ ಸೇರಿದಂತೆ ಸಮೀಪದ ಪಟ್ಟಣಗಳಲ್ಲಿ ಈ ಚಪ್ಪಲಿಗಳನ್ನು ಮಾರುತ್ತಾ ಬಂದಿದ್ದಾರೆ. ಕಾಲಾಂತರದಲ್ಲಿ ಕೊಲ್ಹಾಪುರವು ಈ ಚಪ್ಪಲಿಗೆ ಮುಖ್ಯ ಮಾರುಕಟ್ಟೆ ಆಗಿ ಹೋಯಿತು.

ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಕೊಲ್ಹಾಪುರಿ ಚಪ್ಪಲಿಗೆ ತಾನೊಂದೇ ಜಿಐ ಟ್ಯಾಗ್ ಹಕ್ಕು ಪಡೆಯಲು ಮಹಾರಾಷ್ಟ್ರ ಪ್ರಯತ್ನಿಸುತ್ತಿರುವುದನ್ನು ಗಮನಿಸಿದೆ. ನಂತರ ಲಿಡ್ಕರ್ (LIDKAR) ಮೂಲಕ ಇದಕ್ಕೆ ವಿರೋಧ ವ್ಯಕ್ತಪಡಿಸಿದೆವು.

ಕರ್ನಾಟಕದ ಕುಶಲಕರ್ಮಿಗಳು ಈ ಜಿಐ ಟ್ಯಾಗ್ ಹಕ್ಕಿನಿಂದ ವಂಚಿತರಾಗಬಾರದೆಂದು ಹೋರಾಡಿದೆವು. ಈ ಹೋರಾಟದಲ್ಲಿ ಯಶಸ್ವಿಯಾದೆವು. ಕರ್ನಾಟಕ ಮತ್ತು ಮಹಾರಾಷ್ಟ್ರದ ತಲಾ 4 ಜಿಲ್ಲೆಗಳಿಗೆ ಜಂಟಿಯಾಗಿ ಜಿಐ ಟ್ಯಾಗ್ ನೀಡಲಾಯಿತು ಎಂದು ತಿಳಿಸಿದ್ದಾರೆ.

ಇದೇ ವೇಳೆ ಪ್ರಾಡ ಸಂಸ್ಥೆಯು ಕೊಲ್ಹಾಪುರಿ ಚಪ್ಪಲಿಯನ್ನು ಬಳಸುತ್ತಿರುವ ವಿಚಾರದ ಬಗ್ಗೆ ಮಾತನಾಡಿ, ‘ಪ್ರಾದ ಪ್ರಕರಣದಿಂದ ಒಂದನ್ನು ತಿಳಿಯಬೇಕು, ಜಿಐ ಟ್ಯಾಗ್ ಪಡೆದರೆ ಸಾಕಾಗುವುದಿಲ್ಲ. ಸಾಂಸ್ಕೃತಿಕ ಉದ್ಯಮಶೀಲತೆ ಅವಶ್ಯಕತೆ ಇರುತ್ತದೆ ಎಂದು ಹೇಳಿದ್ದಾರೆ.

ಈ ಕುಶಲಕರ್ಮಿಗಳಿಗೆ ಕೌಶಲ್ಯವೃದ್ಧಿ, ಬ್ರ್ಯಾಂಡಿಂಗ್, ವಿನ್ಯಾಸ ನಾವೀನ್ಯತೆ, ಜಾಗತಿಕ ಮಾರುಕಟ್ಟೆ ಅವಕಾಶ ಇತ್ಯಾದಿಯನ್ನು ನೀಡಬೇಕಿದೆ. ಇವರಿಗೆ ಕ್ರೆಡಿಟ್ ಕೊಡೋದಷ್ಟೇ ಅಲ್ಲ, ಉತ್ತಮ ಬೆಲೆ, ಹೆಚ್ಚಿನ ಮಾರುಕಟ್ಟೆ ಹಾಗೂ ಗೌರವಯುತ ಬದುಕು ಬೇಕಾಗಿದೆ.

ಜಿಐ ಟ್ಯಾಗ್​​ನಿಂದ ಈ ಕರ್ಮಿಗಳಿಗೆ ಕಾನೂನು ಹಕ್ಕು ಸಿಗಬಹುದು. ಅದರೆ, ಅವರಿಗೆ ಜಾಗತಿಕ ಮಾರುಕಟ್ಟೆಗಳನ್ನು ಕೊಡುವ ಜವಾಬ್ದಾರಿ ನಮಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಟಲಿಯ ಉನ್ನತ ಮಟ್ಟದ ಫ್ಯಾಷನ್ ಬ್ರ್ಯಾಂಡ್ ಪ್ರಾಡ ಇದೀಗ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.

ಪ್ಯಾರಿಸ್​​ನಲ್ಲಿ ಇತ್ತೀಚೆಗೆ ನಡೆದ ಸ್ಪ್ರಿಂಗ್ ಸಮ್ಮರ್ 2026 ಫ್ಯಾಷನ್ ಶೋನಲ್ಲಿ ಕೆಲ ಪುರುಷ ಮಾಡಲ್​​ಗಳು ಕೊಲ್ಹಾಪುರಿ ಶೈಲಿಯ ಚಪ್ಪಲಿಗಳನ್ನು ಧರಿಸಿ ರ್ಯಾಂಪ್ ವಾಕ್ ಮಾಡಿದ್ದರು. ಪ್ಯಾರಿಸ್​​ನ ಪ್ರಾಡ ಎನ್ನುವ ಫ್ಯಾಷನ್ ಬ್ರ್ಯಾಂಡ್ ಆಯೋಜಿಸಿದ ಶೋ ಇವೆಂಟ್ ಅದಾಗಿತ್ತು.

ಫ್ಯಾಶನ್ ಬ್ರ್ಯಾಂಡ್​ ಪ್ರಾಡ ಪ್ರಸ್ತುತಪಡಿಸಿರುವ ಈ ಚಪ್ಪಲಿ ವಿನ್ಯಾಸವು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಶತಮಾನಗಳಿಂದ ಕುಶಲಕರ್ಮಿಗಳು ರಚಿಸಿ, ಮುಂದುವರಿಸಿಕೊಂಡು ಬಂದಿರುವ ಪಾರಂಪರಿಕ ಚರ್ಮದ ಪಾದರಕ್ಷೆಗಳನ್ನು ಹೋಲುತ್ತಿತ್ತು.

ಇಟಲಿ ಫ್ಯಾಶನ್ ಬ್ರ್ಯಾಂಡ್ ಈ ಪಾದರಕ್ಷೆಗಳನ್ನು​ ತಯಾರಿಸಿದ್ದು, ಲೆದರ್​ ಸ್ಯಾಂಡಲ್ಸ್​ ಎಂದು ಪರಿಚಯಿಸಿತ್ತು. ಆದರೆ, ಇದರಲ್ಲಿ ಎಲ್ಲಿಯೂ ಭಾರತದ ಕುಶಲಕರ್ಮಿಗಳಿಂದ ಪ್ರೇರಣೆಗೊಂಡಿದ್ದು ಅಥವಾ ಅಲ್ಲಿನ ಪಾರಂಪರಿಕ ವಿನ್ಯಾಸದಿಂದ ಸ್ಫೂರ್ತಿ ಪಡೆದಿದ್ದು ಎಂದು ಸಂಸ್ಥೆ ಕೃಪೆ ಹಂಚಿಕೊಂಡಿಲ್ಲ. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ವ್ಯಾಪಕ ಟೀಕೆ, ಛೀಮಾರಿ ವ್ಯಕ್ತವಾದ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಪ್ರಾಡ ಬ್ರ್ಯಾಂಡ್​, “ಭಾರತದ ಮಹಾರಾಷ್ಟ್ರ ಮತ್ತು ಕರ್ನಾಟಕದ ನಿರ್ದಿಷ್ಟ ಜಿಲ್ಲೆಗಳಲ್ಲಿ ತಯಾರಿಸಲ್ಪಟ್ಟ ಸಾಂಪ್ರದಾಯಿಕ ಭಾರತೀಯ ಪಾದರಕ್ಷೆಗಳಿಂದ ಪ್ರೇರಿತವಾದ ಲೆದರ್​ ಸ್ಯಾಂಡಲ್‌ಗಳನ್ನು ನಾವು ಮಿಲನ್‌ನಲ್ಲಿ ನಡೆದ 2026ರ ವಸಂತ ಬೇಸಿಗೆ ಫ್ಯಾಶನ್​ ಶೋನಲ್ಲಿ ಪ್ರದರ್ಶಿಸಿದೆವು. ಈ ವಿಷಯದ ಕುರಿತು ಈಗಾಗಲೇ ಮಹಾರಾಷ್ಟ್ರ ವಾಣಿಜ್ಯ, ಕೈಗಾರಿಕೆ ಮತ್ತು ಕೃಷಿ ಮಂಡಳಿಯೊಂದಿಗೆ ಸಂಪರ್ಕ ಮಾಡಿದ್ದೇವೆ” ಎಂದು ತಿಳಿಸಿದೆ.

ಇದೇ ವೇಳೆ ಕೊಲ್ಹಾಪುರಿ ಚಪ್ಪಲಿಯನ್ನು ಪ್ರಾದ ರೀಬ್ರ್ಯಾಂಡಿಂಗ್ ಮಾಡಿ 1.2 ಲಕ್ಷ ರೂಗೆ ಮಾರಾಟ ಮಾಡಲಿದೆ ಎನ್ನುವಂತಹ ಸುದ್ದಿಯನ್ನು ಪ್ರಾಡ ತಳ್ಳಿಹಾಕಿದೆ.

ಫ್ಯಾಷನ್ ಶೋನದಲ್ಲಿ ಪ್​ರದರ್ಶಿತವಾದ ಚಪ್ಪಲಿಗಳು ಇನ್ನೂ ವಿನ್ಯಾಸದ ಹಂತದಲ್ಲಿವೆ. ವೇದಿಕೆ ಮೇಲೆ ಮಾಡಲ್​​ಗಳು ಧರಿಸಿದ ಚಪ್ಪಲಿಗಳನ್ನು ಕಮರ್ಷಿಯಲ್ ಆಗಿ ಮಾರಲಿರುವುದು ಖಚಿತ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

SCROLL FOR NEXT