ಉಡುಪಿ: ಕ್ಷೇತ್ರ ಪುನರ್ ವಿಂಗಡಣೆಗೆ ಕಾಂಗ್ರೆಸ್ ವಿರುದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭಾನುವಾರ ತಿಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಕೆ ಶಿವಕುಮಾರ್, ಕೇಂದ್ರ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಮೂಲಕ ಲೋಕಸಭೆಯಲ್ಲಿ ದಕ್ಷಿಣ ರಾಜ್ಯಗಳ ಬಲವನ್ನು ಕುಗ್ಗಿಸಲು ಮುಂದಾಗಿದೆ. ಕೆಳಮನೆಯಲ್ಲಿ ದಕ್ಷಿಣ ರಾಜ್ಯಗಳ ಪ್ರತಿನಿಧಿಗಳನ್ನು ಕಡಿಮೆ ಮಾಡುವುದು ಸರಿಯಲ್ಲ ಎಂದರು.
ಕೇಂದ್ರ ಸರ್ಕಾರ ಏನೇ ಮಾಡಿದರೂ ನಮಗೆ ಸಂತೋಷ ಆಗಲ್ಲ. ಈ ಬಗ್ಗೆ ಚುನಾವಣಾ ಆಯೋಗ ಹಾಗೂ ನ್ಯಾಯಾಲಯದಲ್ಲಿ ಕಾನೂನು ರೀತಿಯಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಮತ್ತೊಂದೆಡೆ ಇದೇ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಕ್ಷೇತ್ರ ಪುನರ್ ವಿಂಗಡಣೆ ವಿಚಾರ ಇನ್ನೂ ಚರ್ಚಾ ಹಂತದಲ್ಲಿ ಇದೆ. ಯಾವ ರೀತಿ ಗೈಡ್‌ಲೈನ್ಸ್ ಬರುತ್ತದೆ ಅಂತ ನೋಡಿಕೊಂಡು ಚರ್ಚೆ ಮಾಡೋಣ ಎಂದಿದ್ದಾರೆ.
ಕ್ಷೇತ್ರ ಪುನರ್ ವಿಂಗಡಣೆಗೆ ಕಾಂಗ್ರೆಸ್ ವಿರೋಧ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕ್ಷೇತ್ರ ಪುನರ್ ವಿಂಗಡಣೆ, ತ್ರಿಭಾಷಾ ವಿಚಾರ ಸೇರಿದಂತೆ ಹಲವು ವಿಚಾರಗಳಲ್ಲಿ ಕಳೆದ ಹಲವು ತಿಂಗಳುಗಳು ಅಥವಾ ವರ್ಷಗಳಿಂದ ಅವರು ಕೇಂದ್ರ ಸರ್ಕಾರದ ನಿಲುವನ್ನು ಟೀಕಿಸುತ್ತಿದ್ದಾರೆ. ಆದರೆ ಅದು ಕೇವಲ ರಾಜಕೀಯ ಕಾರಣದಿಂದ ಮಾಡುತ್ತಿರುವ ಟೀಕೆಯಾಗಿದೆ. ಅವುಗಳಿಂದ ಸ್ವಲ್ಪ ಲಾಭ ಪಡೆದುಕೊಳ್ಳಲು ಬಯಸಿದ್ದಾರೆ ಹೀಗಾಗಿ ಹಲವು ವಿಚಾರಗಳಲ್ಲಿ ಕೇಂದ್ರದ ನಿಲುವನ್ನು ಟೀಕಿಸುತ್ತಿದ್ದಾರೆ ಎಂದರು.
ಕ್ಷೇತ್ರ ಪುನರ್ ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳ ಕ್ಷೇತ್ರ ಕಡಿಮೆ ಆಗಬಹುದು ಎಂಬ ಭಾವನೆ ಎಲ್ಲರಿಗೂ ಇದೆ. ಜನಸಂಖ್ಯೆ ಆಧಾರ ತೆಗೆದುಕೊಂಡಾಗ ಲೋಕಸಭೆ ಸ್ಥಾನ ಕಡಿಮೆ ಆಗುವ ಚರ್ಚೆ ಅನೇಕ ದಿನಗಳಿಂದ ಚರ್ಚೆ ನಡೆಯುತ್ತಿದೆ. ಯಾವ ರೀತಿ ಗೈಡ್‌ಲೈನ್ಸ್ ಅಳವಡಿಕೆ ಮಾಡುತ್ತಾರೆ ಎಂದು ಮುಂದೆ ನೋಡೋಣ ಎಂದರು.