ಬೆಂಗಳೂರು: 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀಡಿರುವ ಹೇಳಿಕೆಯೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಡಿಕೆ.ಶಿವಕುಮಾರ್ ಅವರ ಹೇಳಿಕೆಗೆ ಸಿನಿ ಕಲಾವಿದರು ಹಾಗೂ ವಿರೋಧ ಪಕ್ಷಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿವೆ.
ಚಲನಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ಟಾರ್ ನಟ-ನಟಿಯರು ಗೈರಾದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದರು.
ನಿಮ್ಮ ನಟ್ಟು ಬೋಲ್ಟ್ ಟೈಟ್ ಮಾಡೋದು ಗೊತ್ತು. ಇದನ್ನು ವಾರ್ನ್ ಅಂತಾ ಆದ್ರೂ ಅಂದ್ಕೊಳಿ, ಮನವಿ ಅಂತಾ ಆದ್ರೂ ಅನ್ಕೊಳಿ ಅಂತ ಎಚ್ಚರಿಸಿದ್ದರು.
ನನಗೆ ಚಲನಚಿತ್ರ ವಾಣಿಜ್ಯ ಮಂಡಳಿ, ಈ ಸಿನಿಮಾ ನಟರ ಬಗ್ಗೆ ನನಗೆ ಬಹಳ ಸಿಟ್ಟು ಬಂದುಬಿಟ್ಟಿದೆ, ಏಕೆಂದರೆ, ಕೋವಿಡ್ ಮುಗಿದ ಸಮಯದಲ್ಲಿ ನಾವು ನಮ್ಮ ಜಲ ನಮ್ಮ ಹಕ್ಕು ಎಂಬ ಜಾಥಾ ಮಾಡಿದ್ದೆವು, ನಮ್ಮ ಜನರಿಗೆ ನೀರು ಕೊಡುವ ಉದ್ದೇಶದಿಂದಾಗಿ ನಾವು, ಸಿದ್ದರಾಮಯ್ಯನವರು ಪಾದಯಾತ್ರೆ ಮಾಡಿದ್ದೆವು. ಆದರೆ, ಆಗ ಯಾವ ನಟರೂ ಸಹ ನಮಗೆ ಬೆಂಬಲ ಕೊಡಲಿಲ್ಲ, ಸಾಧು ಕೋಕಿಲ ಮತ್ತು ದುನಿಯಾ ವಿಜಿ ಬಿಟ್ಟರೆ ಇನ್ಯಾರೂ ಸಹ ನಮಗೆ ಬೆಂಬಲ ಕೊಡಲಿಲ್ಲ’ ಅದಕ್ಕೆ ನಮ್ಮ ಸರ್ಕಾರ ಬಂದ ಕೂಡಲೇ ಸಾಧು ಕೋಕಿಲ ಅವರಿಗೆ ಅಕಾಡೆಮಿ ಅಧ್ಯಕ್ಷ ಸ್ಥಾನ ಕೊಟ್ಟೆವು. ನಮ್ಮ ಕಷ್ಟಕಾಲದಲ್ಲಿ ಜೊತೆಗೆ ನಿಂತವರನ್ನು ಗುರುತಿಸಬೇಕು. ನನ್ನನ್ನು ಕೆಲವು ನಟರೆಲ್ಲ ಬಳಸಿಕೊಳ್ಳುತ್ತಾರೆ. ಆ ಮೇಲೆ ಬಿಸಾಡುತ್ತಾರೆ. ಆದರೆ, ಹಾಗೆ ಆಗುವುದಿಲ್ಲ. ನಾನು ಇದನ್ನೆಲ್ಲ ಗಮನಿಸುವುದಿಲ್ಲ ಎಂದು ಯಾರೂ ಸಹ ತಿಳಿದುಕೊಳ್ಳಲು ಹೋಗಬೇಡಿ.
ನಾವು ಐದು ಗ್ಯಾರೆಂಟಿಗಳನ್ನು ತಂದೆವು. ನಾವೇನು ನಮ್ಮ ಊಟಕ್ಕೆ ತಂದೆವಾ? ಇನ್ನು ಮುಂದೆಯಾದರೂ ಸರಿಯಾಗಿ ನಡೆದುಕೊಳ್ಳಿ, ಕೇವಲ 20 ಜನಕ್ಕೆ ಸಿನಿಮಾ ಎಂಬುದು ಬೇಕಾಗಿರೋದಾ? ಸಿನಿಮಾ ಶೂಟಿಂಗ್ ಗೆ ನಾವು ಅನುಮತಿ ಕೊಡಬೇಡಿ ಎಂದು ಹೇಳಿದರೆ, ಶೂಟಿಂಗ್ ನಡೆಯುವುದೇ ಇಲ್ಲ. ಆಗ ಏನು ಮಾಡ್ತೀರಿ? ಯಾರು ಯಾರಿಗೆ ಎಲ್ಲೆಲ್ಲಿ ನೆಟ್ಟು ಬೋಲ್ಟು ಟೈಟ್ ಮಾಡಬೇಕು ಎಂಬುದು ನನಗೆ ಗೊತ್ತಿದೆ ಇದನ್ನು ಎಚ್ಚರಿಕೆ ಎಂದಾದರೂ ತೆಗೆದುಕೊಳ್ಳಿ, ಮನವಿ ಎಂದಾದರೂ ತೆಗೆದುಕೊಳ್ಳಿ ಎಂದು ಹೇಳಿದ್ದರು.
ಈ ಹೇಳಿಕೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ತೀವ್ರವಾಗಿ ಕಿಡಿಕಾರಿದ್ದು, ನಿಮ್ಮ ಸಚಿವ ರಾಜಣ್ಣ ಅವರ ನಟ್ ಬೋಲ್ಟನ್ನೇ ಟೈಟ್ ಮಾಡೋಕೆ ಆಗಿಲ್ಲ. ಇನ್ನು ಯಶ್, ಸುದೀಪ್, ದರ್ಶನ್ ಅವರ ನಟ್ ಬೋಲ್ಟನ್ನೂ ಟೈಟ್ ಮಾಡೋಕೆ ಆಗುತ್ತಾ..? ಅವರ ಸಿನಿಮಾಗಳೇನು ನಿಮ್ಮ ಆಶೀರ್ವಾದಿಂದ ಗೆದ್ದಿದ್ದಾವಾ..? ಎಂದು ತಿರುಗೇಟು ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಜಕೀಯ ಪಾದಯಾತ್ರೆಗೆ ಸಿನಿಮಾ ಕಲಾವಿದರು ಬರುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು. ಕಾಂಗ್ರೆಸ್ ಪಕ್ಷಕ್ಕೆ ನಡೆದುಕೊಳ್ಳುವ ಕಲಾವಿದರಿಗೆ ಮನ್ನಣೆ ಸಿಗುತ್ತದೆ, ಇಲ್ಲವಾದರೆ ಸಿಗುವುದಿಲ್ಲ ಎನ್ನುವ ನಿಮ್ಮ ಮಾತು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಸಮಾಜದಲ್ಲಿ ಎಲ್ಲರೂ ತಮಗೆ ಮತ್ತು ತಮ್ಮ ಪಕ್ಷಕ್ಕೆ ಸೆಲ್ಯೂಟ್ ಹೊಡೆದು, ತಮ್ಮ ಅಡಿಯಾಳುಗಳಂತೆ ನಡೆದುಕೊಳ್ಳಬೇಕು ಎನ್ನುವ ಕೆಟ್ಟ ಮನಸ್ಥಿತಿಯಿಂದ ಹೊರಗೆ ಬನ್ನಿ. ಕಲಾವಿದರು ಯಾರ ಸ್ವತ್ತೂ ಅಲ್ಲ. ಕಲಾವಿದರಿಗೆ ಅವರ ವಿವೇಚನೆಗೆ ತಕ್ಕಂತೆ ನಡೆದುಕೊಳ್ಳುವ, ಯಾರ ಜೊತೆ ಬೇಕಾದರೂ ಗುರುತಿಸಿಕೊಳ್ಳುವ ಅಥವಾ ಗುರುತಿಸಿಕೊಳ್ಳದಿರುವ ಸ್ವಾತಂತ್ರ್ಯವಿದೆ, ಹಕ್ಕಿದೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಮಾತನಾಡಿ, ಜನರು ಕಾಂಗ್ರೆಸ್‌ಗೆ 135 ಸ್ಥಾನಗಳನ್ನು ನೀಡಿದ್ದು ನಟ್‌ಗಳು ಮತ್ತು ಬೋಲ್ಟ್‌ಗಳನ್ನು ಸರಿಪಡಿಸಲು ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಶಿವಕುಮಾರ್ ಅವರ ಪಾದಗಳು ನೆಲದ ಮೇಲೆ ಇಲ್ಲದಂತೆ ಕಾಣುತ್ತಿದೆ. ಅಧಿಕಾರವು ಅವರನ್ನು ದುರಹಂಕಾರದಿಂದ ಮಾತನಾಡುವಂತೆ ಮಾಡುತ್ತಿದೆ. ಅವರ ಬಗ್ಗೆ ಮಾತನಾಡುವುದಕ್ಕಿಂತ ಮೌನವಾಗಿರುವುದೇ ಒಳ್ಳೆಯದು ಎಂದು ಹೇಳಿದ್ದಾರೆ.
ನಟ ಜಗ್ಗೇಶ್ ಅವರು ಪ್ರತಿಕ್ರಿಯಿಸಿ, ಉದ್ಘಾಟನಾ ಕಾರ್ಯಕ್ರಮ 7 ಗಂಟೆಗೆ ಇದ್ದರೆ, ಆಹ್ವಾನ ಪತ್ರಿಕೆ ತಲುಪಿದ್ದು 6 ಗಂಟೆಗೆ. ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲಾ, ಸಂವಾದವಿಲ್ಲ. ಕಲಾವಿದರ ಸಂಘವೇ ಕಣ್ಮರೆಯಾಗಿದೆ. ಕರ್ನಾಟಕದಲ್ಲಿ ಕನ್ನಡ ಚಿತ್ರರಂಗದ ಅವಸಾನ. ಯಾವ ಕಲಾವಿದರು ಏನಾಗಿದ್ದಾರೆ ಕಲಾವಿದರಾದ ನಮಗೇ ಮಾಹಿತಿ ಇಲ್ಲ. ಸಾವಿನ ಅಂಚಿಗೆ ಬಂದಿರುವ ಚಿತ್ರರಂಗಕ್ಕೆ ಬೋಲ್ಟೇ ಇಲ್ಲ, ಇನ್ನು ಟೈಟ್ ಮಾಡಿ ಏನು ಪ್ರಯೋಜನ? ಎಂದು ಹೇಳಿದ್ದಾರೆ.
ಕಲಾವಿದರು ಒಟ್ಟುಗೂಡಬೇಕು ಎಂದೇ ಡಾ.ರಾಜ್‌ಕುಮಾರ್ ಅವರು ಕಲಾವಿದರ ಸಂಘ ಮಾಡಿದ್ದರು. ದೌರ್ಭಾಗ್ಯ, ಅದು ಇಂದು ನಿಷ್ಕ್ರಿಯಗೊಂಡಿದೆ. ಕೂಡಲೇ ನಿಮ್ಮ ಅಧಿಕಾರಿಗಳಿಗೆ ಸೂಚಿಸಿ ಎಲೆಕ್ಷನ್ ಮಾಡಿಸಿ. ಕಲಾವಿದರು ಒಂದೆಡೆ ಕೂರುವಂತೆ ಮಾಡಿ. ಒಗ್ಗಟ್ಟು ಇರುವ ಮನೆ ಹಾಳಾದ ನಿದರ್ಶನವಿಲ್ಲ. ಚಿತ್ರರಂಗದ ಸಮಸ್ಯೆಗಳು ಕೂಡ ಅನೇಕ. ಇದನ್ನು ನಿಮ್ಮ ಗಮನಕ್ಕಾಗಿ ತಂದಿರುವೆ ಎಂದು ಹೇಳಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಂ. ನರಸಿಂಹಲು ಅವರು ಮಾತನಾಡಿ, ಕಲಾವಿದರು ಮತ್ತು ಇತರ ಚಲನಚಿತ್ರೋದ್ಯಮಿಗಳು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ, ಅವರಿಗೆ ಯಾವುದೇ ಆಹ್ವಾನ ಪತ್ರಿಕೆಗಳನ್ನು ನೀಡಿಲ್ಲ. ಹೀಗಿರುವಾಗ ಸಚಿವರು ಅಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.