ಡಿ.ಕೆ ಶಿವಕುಮಾರ್ 
ರಾಜ್ಯ

ನೂತನ ವಿವಿ ವಿಲೀನ ಮಾಡಲು ಮುಂದಾಗಿದ್ದೇವೆ, ಸಂಪೂರ್ಣವಾಗಿ ವಜಾ ಮಾಡುತ್ತಿಲ್ಲ: ಡಿ.ಕೆ ಶಿವಕುಮಾರ್

ನೀವು ರಾಮನಗರದಲ್ಲಿ ಬಳಸಿದ ಭಾಷೆ ಎಂತಹದ್ದು? ಗಂಡಸುತನದ ಬಗ್ಗೆ ಮಾತನಾಡಿದ್ದು ಸರಿಯೇ? ಗಂಡಸುತನದ ಬಗ್ಗೆ ಮಾತನಾಡಿ ಅಲ್ಲಿ ಒಂದು ಪಕ್ಷದ ಕಚೇರಿ ಆರಂಭಿಸಲು ನಿಮ್ಮಿಂದ ಸಾಧ್ಯವಾಗಲಿಲ್ಲ ಎಂದು ತಿರುಗೇಟು ನೀಡಿದರು.

ಬೆಂಗಳೂರು: ಬಿಜೆಪಿ ಸರ್ಕಾರ ಆರಂಭಿಸಿದ್ದ ನೂತನ ವಿವಿಗಳ ಸಾಧಕ ಬಾದಕಗಳನ್ನು ಅಧ್ಯಯನ ಮಾಡಿದ ನಂತರ ನಮ್ಮ ಸರ್ಕಾರ ಈ ವಿವಿಗಳನ್ನು ಹಳೆಯ ವಿವಿಗಳ ಜತೆಗೆ ವಿಲೀನ ಮಾಡುತ್ತೇವೆಯೇ ಹೊರತು, ಸಂಪೂರ್ಣವಾಗಿ ವಜಾ ಮಾಡುತ್ತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಹಾಗೂ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಅವರು ನೂತನ ವಿವಿಗಳ ವಿಚಾರವನ್ನು ಪ್ರಸ್ತಾಪಿಸಿದಾಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ನಿಮ್ಮ (ಬಿಜೆಪಿ) ಸರ್ಕಾರದ ಅವಧಿಯಲ್ಲಿ ಅಶ್ವತ್ಥ್ ನಾರಾಯಣ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ, ನಿಮ್ಮ ಪರಿಕಲ್ಪನೆ ಮೇಲೆ ನೀವು ಈ ಹೊಸ ವಿವಿಗಳನ್ನು ಸ್ಥಾಪಿಸಿದ್ದೀರಿ. ನಾವು ಖಾಸಗಿ ವಿವಿ ಮಾಡಬೇಕಾದರೂ ಕೆಲವು ಮಾನದಂಡಗಳನ್ನು ನಿಗದಿ ಮಾಡಿದ್ದೇವೆ. ವಿದ್ಯಾರ್ಥಿಗಳಿಗೂ ವಿವಿಗಳಿಗೂ ಏನು ಸಂಬಂಧ? ವಿದ್ಯಾರ್ಥಿಗಳು ತಾವುಗಳು ವ್ಯಾಸಂಗ ಮಾಡುತ್ತಿರುವ ಅದೇ ಕಾಲೇಜುಗಳಲ್ಲಿ ವ್ಯಾಸಂಗ ಮುಂದುವರಿಸುತ್ತಾರೆ.

ಆದರೆ ಮೈಸೂರು ವಿವಿ, ಮಂಡ್ಯ ವಿವಿ, ಚಾಮರಾಜನಗರ ವಿವಿಗಳನ್ನೇ ಉದಾಹರಣೆಯಾಗಿ ತೆಗೆದುಕೊಡು ನೋಡುವುದಾದರೆ, ವಿದ್ಯಾರ್ಥಿಗಳು ಮೈಸೂರು ವಿವಿ ಹೆಸರಲ್ಲಿ ಪದವಿ ಪಡೆಯುವುದಕ್ಕೂ, ಬೇರೆ ಇತರೆ ವಿವಿ ಹೆಸರಲ್ಲಿ ಪದವಿ ಪ್ರಮಾಣಪತ್ರ ಪಡೆಯುವುದಕ್ಕೂ ಎಷ್ಟು ವ್ಯತ್ಯಾಸವಿದೆ” ಎಂದು ವಿವರಿಸಿದರು.

ಯಡಿಯೂರಪ್ಪನವರ ಪುತ್ರ ಸದನದಲ್ಲಿ ಇದ್ದಾರೆ. ಅವರ ಸಹೋದರಿಯ ಪುತ್ರ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಲು ಮುಂದಾದಾಗ. ಅವರು ಪಿಇಎಸ್ ಶಿಕ್ಷಣ ಸಂಸ್ಧೆಯಲ್ಲಿ ಓದಿದ್ದರು. ಅದು ಉತ್ತಮ ಸಂಸ್ಥೆಯಾದರೂ ಅದು ಅಧಿಕೃತ ವಿವಿಯಲ್ಲ ಎಂಬ ಕಾರಣಕ್ಕೆ ಅವರಿಗೆ ವಿದೇಶಿ ವಿವಿಯಲ್ಲಿ ಪ್ರವೇಶಾತಿ ನಿರಾಕರಿಸಲಾಗಿತ್ತು.

ಎಸ್.ಎಂ ಕೃಷ್ಣ ಅವರು ವಿದೇಶಾಂಗ ಸಚಿವರಾಗಿದ್ದಾಗ ಅನೇಕ ಪ್ರಯತ್ನಗಳನ್ನು ಮಾಡಿ ಕೊನೆಗೆ ಅಲ್ಲಿ ಪ್ರವೇಶಾತಿ ಸಿಕ್ಕಿತು. ಇದು ಕೇವಲ ಒಂದು ಉದಾಹರಣೆಯಷ್ಟೇ. ಬೆಂಗಳೂರು ವಿವಿ, ಮೈಸೂರು ವಿವಿ ಪ್ರತಿಷ್ಠಿತ ವಿವಿಗಳಾಗಿವೆ. ಈ ವಿವಿಗಳ ಜಾರಿ ಕಾರ್ಯಸಾಧುವಲ್ಲ ಎಂದು ವಿಲೀನ ಮಾಡುತ್ತಿದ್ದೇವೆಯಷ್ಟೇ. ಈ ವಿಚಾರವಾಗಿ ನಾವು ಸಮಿತಿಯನ್ನು ರಚಿಸಿ ಅಧ್ಯಯನ ನಡೆಸಿದ್ದೇವೆ ಎಂದು ಹೇಳಿದರು.

ನಾನು ಕೂಡ ಶಿಕ್ಷಣದ ಮೇಲೆ ಆಸಕ್ತಿ ಹೊಂದಿರುವವನೆ” ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದಾಗ. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ನಿಮ್ಮ ಡೈಲಾಗ್ ಅನ್ನು ಮತ್ತೊಮ್ಮೆ ಸಂಪೂರ್ಣವಾಗಿ ಹೇಳಿ ಎಂದು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, “ಇದು ಕೇವಲ ಡೈಲಾಗ್ ಅಲ್ಲ. ನೀವು ಕಳುಹಿಸಿದ ತಿಹಾರ್ ಜೈಲಿಂದ ಬಂದ ನಂತರ ನಾನು ಪಕ್ಷದ ಕಚೇರಿಯಲ್ಲಿ ಈ ಮಾತನ್ನು ಹೇಳಿದ್ದೆ. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ನಾನು ರಾಜಕಾರಣಿ. ನಾನು ವಿದ್ಯಾರ್ಥಿಯಾಗಿದ್ದಾಗ ಹೆಚ್ಚು ಓದಲಿಲ್ಲ. ಫೈನಲ್ ಇಯರ್ ಡಿಗ್ರಿ ಮಾಡುವಾಗ ಪಕ್ಷ ನನ್ನನ್ನು ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿತು. ನಂತರ 47ನೇ ವಯಸ್ಸಿಗೆ ಪದವಿ ಮಾಡಿದೆ” ಎಂದು ವಿರೋಧ ಪಕ್ಷದ ನಾಯರ ಆಸೆ ಈಡೇರಿಸಿದರು.

ಮಾತು ಮುಂದುವರಿಸಿದ ಶಿವಕುಮಾರ್ ಅವರು, “ನನಗೆ ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚು ಆಸಕ್ತಿ ಇದೆ. ಈ ವಿಚಾರದಲ್ಲಿ ನೀವು ಉತ್ತಮ ಸಲಹೆಗಳನ್ನು ಕೊಟ್ಟರೆ ನಾವು ಅದನ್ನು ಪರಿಗಣಿಸುತ್ತೇವೆ. ಈಗ ನಿರ್ಮಿಸಿರುವ ಹೊಸ ವಿವಿಗಳಲ್ಲಿ ಹೋಗಿ ಕೆಲಸ ಮಾಡಲು ಯಾವುದೇ ಪ್ರಾಧ್ಯಾಪಕರು ಮುಂದೆ ಬರುತ್ತಿಲ್ಲ. ಒಬ್ಬರನ್ನು ಉಪಕುಲಪತಿಗಳನ್ನಾಗಿ ಹಾಗೂ ಮತ್ತೊಬ್ಬರನ್ನು ರಿಜಿಸ್ಟ್ರಾರ್ ಮಾಡಿದರೆ ಅದು ವಿಶ್ವವಿದ್ಯಾಲಯವಾಗುತ್ತದೆಯೇ?” ಎಂದು ಪ್ರಶ್ನಿಸಿದರು.

“ನೀವುಗಳು ವಿವಿಯನ್ನು ವಿಭಾಗ ಮಾಡಿದ್ದೀರಿ. ನಾವು ಆ ವಿವಿಗಳನ್ನು ವಜಾಗೊಳಿಸಲು ಆಗುವುದಿಲ್ಲ. ಹೀಗಾಗಿ ನಾವು ಅವುಗಳನ್ನು ಪ್ರಮುಖ ವಿವಿಗಳ ಜತೆ ವಿಲೀನ ಮಾಡುತ್ತಿದ್ದೇವೆ. ನಮ್ಮ ಹಾಗೂ ನಿಮ್ಮ ನಡುವೆ ಇರುವ ವ್ಯತ್ಯಾಸ ಎಂದರೆ ನೀವು ಜನರನ್ನು ಒಡೆಯುತ್ತೀರಿ, ನಾವು ಜನರನ್ನು ಒಟ್ಟುಗೂಡಿಸುತ್ತೇವೆ” ಎಂದು ವಿರೋಧ ಪಕ್ಷಗಳ ನಾಯಕರಿಗೆ ಮಾತಿನಲ್ಲೇ ತಿವಿದರು.

ನಂತರ ಆರ್.ಅಶೋಕ್ ಅವರು ಮಾತನಾಡುತ್ತಾ, ಡಿ.ಕೆ. ಶಿವಕುಮಾರ್ ಅವರ ಹೃದಯ ಒಳ್ಳೆಯದೇ ಇರಬಹುದು, ಆದರೆ ಚಲನಚಿತ್ರ ರಂಗದ ಕಲಾವಿದರ ಮೇಲೆ ತೋರಿರುವ ನಟ್ಟು ಬೋಲ್ಟು ಭಾಷೆ ಸರಿಯಲ್ಲ ಎಂದು ತಿಳಿಸಿದರು. ಈ ವೇಳೆ ಮಧ್ಯೆ ಮಾತನಾಡಿದ ಅಶ್ವತ್ಥ್ ನಾರಾಯಣ ಅವರು ಇಂತಹ ಭಾಷೆ ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಬಳಸುವಂತಹದ್ದು, ಕರ್ನಾಟಕದಲ್ಲಿ ಬಳಸಬಾರದು ಎಂದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಶಿವಕುಮಾರ್ ಅವರು, “ನೀವು ರಾಮನಗರದಲ್ಲಿ ಬಳಸಿದ ಭಾಷೆ ಎಂತಹದ್ದು? ಗಂಡಸುತನದ ಬಗ್ಗೆ ಮಾತನಾಡಿದ್ದು ಸರಿಯೇ? ಗಂಡಸುತನದ ಬಗ್ಗೆ ಮಾತನಾಡಿ ಅಲ್ಲಿ ಒಂದು ಪಕ್ಷದ ಕಚೇರಿ ಆರಂಭಿಸಲು ನಿಮ್ಮಿಂದ ಸಾಧ್ಯವಾಗಲಿಲ್ಲ” ಎಂದು ತಿರುಗೇಟು ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT