2025-26ನೇ ಸಾಲಿನ ರಾಜ್ಯ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಮಂಡಿಸಿದರು. ಸಿದ್ದರಾಮಯ್ಯ ಇಂದು 4 ಲಕ್ಷ ಕೋಟಿ ರೂಪಾಯಿ ಗಾತ್ರದ ದಾಖಲೆಯ 16ನೇ ಬಜೆಟ್ ಮಂಡಿಸಿದರು. ಈ ಬಜೆಟ್ 3,11,739 ಕೋಟಿ ರಾಜಸ್ವ ವೆಚ್ಚ 71,336 ಕೋಟಿ ಬಂಡವಾಳ ವೆಚ್ಚ ಹಾಗೂ 26,474 ಕೋಟಿ ರೂಪಾಯಿಗಳ ಸಾಲ ಮರುಪಾವತಿಯನ್ನು ಒಳಗೊಂಡಿದೆ. ಈ ಬಜೆಟ್ ನಲ್ಲಿ ಬೆಂಗಳೂರಿಗೆ ಬಂಪರ್ ಅನುದಾನ ಘೋಷಣೆಯಾಗಿದೆ. 7 ಸಾವಿರ ಕೋಟಿ ಅನುದಾನ ಸಿಕ್ಕಿದ್ದರೆ ಟನಲ್ ಕಾಮಗಾರಿಗೆ 40 ಸಾವಿರ ಕೋಟಿ ನೀಡಲಾಗಿದೆ. ಇನ್ನುಳಿದಂತೆ ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ, ಕೃಷಿ ತೋಟಗಾರಿಕೆಗೆ 7 ಸಾವಿರ ಕೋಟಿ, ಲೋಕೋಪಯೋಗಿ ಇಲಾಖೆಗೆ 11,841 ಕೋಟಿ, 500 ಕೋಟಿ ವೆಚ್ಚದಲ್ಲಿ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ. 100 ಉರ್ದು ಶಾಲೆಗಳ ಉನ್ನತೀಕರಣಕ್ಕೆ 400 ಕೋಟಿ ನೀಡಲಾಗಿದೆ.
ಈ ಬಜೆಟ್ ನಲ್ಲಿ ಶಿಕ್ಷಣ ಇಲಾಖೆಗೆ 45,286 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಹಾಗೆಯೇ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,955 ಕೋಟಿ, ಇಂಧನ ಇಲಾಖೆಗೆ 26,896 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಗೆ 26,735 ಕೋಟಿ, ನೀರಾವರಿ ಇಲಾಖೆಗೆ 22,181 ಕೋಟಿ, ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗೆ 21,405 ಕೋಟಿ ಹಾಗೂ ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 20,625 ಕೋಟಿ ಹಣ ಮೀಸಲಿಡಲಾಗಿದೆ. 2025-26ನೇ ಸಾಲಿನಲ್ಲಿ ಅಂದಾಜು 1,16,000 ಕೋಟಿ ರೂ. ಸಾಲದ ಮೊರೆ ಹೋಗಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. 2024-25 ಸಾಲಿನಲ್ಲಿ 1,05,246 ಕೋಟಿ ರೂ. ಸಾಲದ ಮೊರೆ ಹೋಗಲಾಗಿತ್ತು. ಆ ಮೂಲಕ ಈ ಬಾರಿ 10,754 ಕೋಟಿ ರೂ. ಹೆಚ್ಚುವರಿ ಸಾಲದ ಮೊರೆ ಹೋಗಲಾಗಿದೆ.
ಸಿಎಂ ಸಿದ್ದರಾಮಯ್ಯ ಮಂಡಿಸಿದ್ದು ಅಭಿವೃದ್ಧಿ ಕೇಂದ್ರಿತ ಬಜೆಟ್ ಎಂದು ಕಾಂಗ್ರೆಸ್ಸಿಗರು ಶ್ಲಾಘಿಸುತ್ತಿದ್ದರೆ ಅತ್ತ ವಿಪಕ್ಷ ಬಿಜೆಪಿ ನಾಯಕರು ಬಜೆಟ್ ವಿರುದ್ಧ ಕಿಡಿಕಾರಿದ್ದಾರೆ. ಇದು ಹಲಾಲ್, ಸಾಬರ ಬಜೆಟ್ ಎಂದು ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅಲ್ಪಸಂಖ್ಯಾತರು ಎಂದರೆ ಬರೀ ಮುಸ್ಲಿಂರಲ್ಲ. ಅದರಲ್ಲಿ ಕ್ರಿಶ್ಚಿಯನ್, ಸಿಖ್ಖ್, ಜೈನರು, ಬೌದ್ಧರು ಈ ಎಲ್ಲಾ ಸಮುದಾಯಗಳು ಬರುತ್ತವೆ. ರಾಜ್ಯದ ಬಜೆಟ್ ಗಾತ್ರ 4.09 ಲಕ್ಷ ಕೋಟಿ. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ನೀಡಿದ್ದು ಕೇವಲ ರೂ.4,500 ಕೋಟಿ. ಇದನ್ನು ಹಲಾಲ್ ಬಜೆಟ್, ಓಲೈಕೆ ಬಜೆಟ್ ಎನ್ನುವ ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇಲ್ಲ ಎಂದು ಟೀಕಿಸಿದರು.
ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಮುಡಾ ಪ್ರಕರಣ ಸಂಬಂಧ ಇಡಿ ನೀಡಿದ್ದ ಸಮನ್ಸ್ ರದ್ದು ಕೋರಿ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ, ತೀರ್ಪು ಕಾಯ್ದಿರಿಸಿತ್ತು. ಇಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಇಡಿ ಸಮನ್ಸ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
15 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕನ್ನಡದ ನಟಿ ರನ್ಯಾ ರಾವ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ಡಿಆರ್ಐ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದೆ. ಡಿಆರ್ಐ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ನಟಿಯನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆರ್ಥಿಕ ಅಪರಾಧಗಳ ನ್ಯಾಯಾಲಯದ ನ್ಯಾಯಮೂರ್ತಿ ವಿಶ್ವನಾಥ್ ಸಿ ಗೌಡರ್ ಅವರು ನಟಿಯನ್ನು ಮಾರ್ಚ್ 9 ರಿಂದ ಮಾರ್ಚ್ 11ರವರೆಗೆ ಡಿಆರ್ಐ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ. ಕಳೆದ ಮಾರ್ಚ್ 3ರ ರಾತ್ರಿ ನಟಿ ದುಬೈನಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ತಪಾಸಣೆ ನಡೆಸಿದ್ದ ಸಿಬ್ಬಂದಿ ಚಿನ್ನ ಸಮೇತ ನಟಿಯನ್ನು ವಶಕ್ಕೆ ಪಡೆದಿದ್ದರು.