ಕೊಪ್ಪಳ: ಅನಾರೋಗ್ಯ ಪೀಡಿತ ಮಗುವಿಗೆ ಅಗರಬತ್ತಿಯಿಂದ ಸುಟ್ಟರೆ, ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆಯಿಂದ ತಾಯಿಯೊಬ್ಬಳು ಮಾಡಿದ ಕೈ ಚಿಕಿತ್ಸೆಯ ಪರಿಣಾಮ ಮಗು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
2024ರ ನವೆಂಬರ್‌ನಲ್ಲಿ ಏಳು ತಿಂಗಳ ಮಗುವಿಗೆ ಅನಾರೋಗ್ಯ ಕಾಡಿತ್ತು. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಕಾಯಿಲೆ ವಾಸಿಯಾಗಿರಲಿಲ್ಲ. ಹೀಗಾಗಿ ಮಗುವಿಗೆ ಅಗರಬತ್ತಿಯ ಬೆಂಕಿಯಿಂದ ಬಿಸಿ ಸುಟ್ಟರೆ ವಾಸಿಯಾಗುತ್ತದೆ ಎಂದು ಯಾರೋ ಹೇಳಿದ್ದ ಮಾತನ್ನು ನಂಬಿದ ತಾಯಿ, ಅದನ್ನು ಪ್ರಯೋಗ ಮಾಡಿದ್ದಾರೆ. ಹೀಗಾಗಿ ಮಗುವಿಗೆ ಸುಟ್ಟಗಾಯಗಳಿಂದ ನಂಜಾಗಿ ಸಾವನ್ನಪ್ಪಿದೆ.
ಈ ನಡುವೆ ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಮಗುವಿನ ದೇಹದ ಮೇಲೆ ಸುಟ್ಟ ಗಾಯಗಳು ಕಂಡು ಬಂದಿದ್ದು. ಮಕ್ಕಳ ರಕ್ಷಣಾ ಘಟಕದವರಿಗೆ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಮಟ್ಟದ ಶಿಶುಮರಣ ಪರಿಶೀಲನಾ ಸಭೆ ವೇಳೆ ಈ ವಿಷಯ ಗಮನಕ್ಕೆ ಬಂದಿದೆ. ಊದಿನಕಡ್ಡಿಯಿಂದ ಸುಟ್ಟಿದ್ದಕ್ಕೆ ನಂಜಾಗಿ ಮಗು ಮೃತಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಬಳಿಕ ಮಗುವಿನ ಸಾವಿಗೆ ಕಾರಣವಾದ ತಾಯಿಯ ವಿರುದ್ಧವೇ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ದೂರು ನೀಡಿದ್ದು, ಈ ಕುರಿತು ಎಫ್.ಐ.ಆರ್. ದಾಖಲಿಸಿದ್ದಾರೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಹಲವರು ಜಾಗೃತರಾಗಿದ್ದಾರೆ. ಆದರೆ ಇನ್ನೂ ಕೆಲವರು ಮೂಢನಂಬಿಕೆಗಳನ್ನು ಅನುಸರಿಸುತ್ತಾರೆ, ಅದು ಮುಗ್ಧರ ಸಾವಿಗೆ ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.