ಹಾವೇರಿ: 33 ಲಕ್ಷ ರೂಪಾಯಿಗಳ ಕಳ್ಳತನ ಪ್ರಕರಣವನ್ನು ಹಾವೇರಿ ಪೊಲೀಸರು ಭೇದಿಸಿದ್ದು, ಆಂಧ್ರ ಪ್ರದೇಶದಿಂದ ಆರೋಪಿಯನ್ನು ಬಂಧಿಸಿ ಕರೆತರಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮಾರ್ಚ್ 6 ರಂದು ಈ ಘಟನೆ ನಡೆದಿದ್ದು, ಸಂತ್ರಸ್ತ ಸಂತೋಷ್ ಎಂಬುವವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಸುಮಾರು 33 ಲಕ್ಷ ರೂಪಾಯಿಗಳನ್ನು ಡ್ರಾ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
'ಸಂತೋಷ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಸುಮಾರು 33 ಲಕ್ಷ ರೂ.ಗಳನ್ನು ಡ್ರಾ ಮಾಡಿದ್ದಾರೆ. ಈ ವೇಳೆ, ಅಂತರರಾಜ್ಯ ಗ್ಯಾಂಗ್ ಅವರನ್ನು ಹಿಂಬಾಲಿಸಿದೆ. ಸಂತೋಷ್ ತಮ್ಮ ಮನೆಯೊಳಗೆ ಹೋಗುವಾಗ ಹಣವನ್ನು ತಮ್ಮ ವಾಹನದಲ್ಲೇ ಬಿಟ್ಟು ಹೋಗಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು, ಗ್ಯಾಂಗ್ ಸದಸ್ಯರು ಕಾರಿನ ಗಾಜು ಒಡೆದು ಕೇವಲ 40-50 ಸೆಕೆಂಡುಗಳಲ್ಲಿ ಹಣವನ್ನು ಕದ್ದಿದ್ದಾರೆ. ಅವರು ತಕ್ಷಣ ಎರಡು ಬೈಕ್‌ಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ' ಎಂದು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಂಶು ಕುಮಾರ್ ತಿಳಿಸಿದ್ದಾರೆ.
ಸಂಜೆ 5.30ರ ಸುಮಾರಿಗೆ ಕಳ್ಳತನ ನಡೆದಿರುವ ಬಗ್ಗೆ ಸಂತೋಷ್‌ಗೆ ತಿಳಿಸಿದೆ. ಅವರು ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಘಟನೆ ನಂತರ, ಹಾವೇರಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಅಪರಾಧಿಗಳನ್ನು ಪತ್ತೆಹಚ್ಚಲು ನಾಲ್ಕು ತಂಡಗಳನ್ನು ರಚಿಸಲಾಗಿತ್ತು ಎಂದು ಹೇಳಿದರು.
'ಎರಡು ದಿನಗಳ ತೀವ್ರ ತನಿಖೆಯ ನಂತರ, ಪೊಲೀಸರು ಆಂಧ್ರ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 30 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ' ಎಂದು ಎಸ್‌ಪಿ ಅಂಶು ಕುಮಾರ್ ಹೇಳಿದರು.