ಬೆಂಗಳೂರು: ಮೆಟ್ರೋ ರೈಲು ಮತ್ತು ಸರ್ಕಾರಿ ಬಸ್ ಟಿಕೆಟ್ ದರ ತೀವ್ರ ಏರಿಕೆ ಬಳಿಕ ಇದೀಗ ಬೆಂಗಳೂರಿನಲ್ಲಿ ಆಟೋರಿಕ್ಷಾ ದರಗಳು ಸಹ ಏರಿಕೆಯಾಗುವ ಸಾಧ್ಯತೆಯಿದೆ.
ನಗರದಲ್ಲಿನ ಆಟೋರಿಕ್ಷಾ ಚಾಲಕರ ಸಂಘಗಳ ಬೇಡಿಕೆಗಳಿಗೆ ಸ್ಪಂದಿಸಿ, ಬೆಂಗಳೂರು ನಗರ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಬುಧವಾರ ಸಭೆ ಕರೆದು ಸಂಭಾವ್ಯ ದರ ಪರಿಷ್ಕರಣೆ ಕುರಿತು ಚರ್ಚಿಸಿದೆ.
ಸಾರಿಗೆ ಇಲಾಖೆಯ ಮೂಲಗಳ ಪ್ರಕಾರ, ಪ್ರಸ್ತುತ ಕನಿಷ್ಠ ದರ 30 ರೂ. ಮತ್ತು ಎರಡು ಕಿಲೋಮೀಟರ್‌ಗಿಂತ ಹೆಚ್ಚಿನ ದೂರಕ್ಕೆ ಪ್ರತೀ ಕಿಲೋಮೀಟರ್‌ಗೆ 15 ರೂ. ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ಆಟೋರಿಕ್ಷಾ ಚಾಲಕರು ಕನಿಷ್ಠ ದರವನ್ನು 50 ರೂ.ಗೆ ಏರಿಸಲು ಮತ್ತು ಎರಡು ಕಿಲೋಮೀಟರ್‌ಗಿಂತ ಹೆಚ್ಚಿನ ದೂರಕ್ಕೆ ಪ್ರತಿ ಕಿಲೋಮೀಟರ್‌ಗೆ 25 ರೂ. ಗೆ ದರ ಏರಿಕೆ ಮಾಡಲು ಪ್ರಸ್ತಾಪಿಸಿದ್ದಾರೆ.
ಆದಾಗ್ಯೂ, ಸಾರಿಗೆ ಇಲಾಖೆಯು ಕನಿಷ್ಠ ಪ್ರಯಾಣ ದರವನ್ನು 40 ರೂ.ಗೆ ಮಿತಿಗೊಳಿಸಲು ಮಾತುಕತೆ ನಡೆಯುತ್ತಿದ್ದು, ಪ್ರತಿ ಕಿ.ಮೀ.ಗೆ 15 ರೂನಿಂದ 20 ರೂ.ಗೆ ದರ ನಿಗದಿಪಡಿಸಲಾಗಿದೆ.
ಆಟೋರಿಕ್ಷಾ ದರ ಏರಿಕೆಯಾದ ನಂತರ, ರೈಡ್-ಹೇಲಿಂಗ್ ಕಂಪನಿಗಳು ಕ್ಯಾಬ್ ಸೇವೆಗಳ ದರವನ್ನು ಹೆಚ್ಚಿಸಬೇಕಾಗುತ್ತದೆ ಎಂದು ಸ್ವಾಭಿಮಾನಿ ಚಾಲಕ ಸಂಘಟನೇಗಳ ಒಕ್ಕೂಟ (SCSO) ಅಧ್ಯಕ್ಷ ತನ್ವೀರ್ ಪಾಷಾ ಪಿಟಿಐಗೆ ತಿಳಿಸಿದ್ದಾರೆ.