ಬೆಂಗಳೂರು: ಬಿಜೆಪಿ ಅಧಿಕಾರಾವಧಿಯಲ್ಲಿ ಸಿವಿಲ್ ಕಾಮಗಾರಿಗಳಲ್ಲಿ ಶೇ. 40ರಷ್ಟು ಕಮಿಷನ್ ಪಡೆದ ಆರೋಪದ ಕುರಿತು ತನಿಖೆ ನಡೆಸಲು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಎಚ್‌ಎನ್ ನಾಗಮೋಹನ್ ದಾಸ್ ಆಯೋಗವನ್ನು ಕಾಂಗ್ರೆಸ್ ಪ್ರೇರಿತ ಆಯೋಗ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಗುರುವಾರ ಟೀಕಿಸಿದ್ದಾರೆ.
ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಆಯೋಗವು 20 ಸಾವಿರ ಪುಟಗಳ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಸಲ್ಲಿಸಿದೆ.
ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಸಂಪೂರ್ಣ ರಾಜಕೀಯ ವರದಿಯನ್ನು ಸಲ್ಲಿಸಲಾಗಿದೆ. ವಿಚಾರಣೆಯ ಮಾನದಂಡಗಳೇನು? ಯಾವ ದಾಖಲೆಗಳನ್ನು ಪರಿಶೀಲಿಸಲಾಗಿದೆ? ಇವೇ ನಿರ್ಣಾಯಕ ಅಂಶಗಳಾ?ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಯಾವಾಗಲೂ ಅವರನ್ನು ನೇಮಿಸುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ನಾಗಮೋಹನ್ ದಾಸ್ ಖಾಯಂ ಆಗಿದ್ದು, ಎಲ್ಲಾ ವಿಚಾರಣೆಗಳನ್ನು ಅವರಿಗೆ ವಹಿಸಲಾಗಿದೆ ಎಂದು ಅಶೋಕ್ ಟೀಕಿಸಿದರು.
ನಾಗಮೋಹನ್ ದಾಸ್ ಕಾಂಗ್ರೆಸ್ ಪರವಾಗಿ ವರದಿ ಸಲ್ಲಿಸುವ ಅಭ್ಯಾಸವಿದೆ. ಇದು ರಾಜಕೀಯವಲ್ಲದೆ ಬೇರೇನೂ ಅಲ್ಲ. ಈ ಆಯೋಗವು ತನಿಖಾ ಸಂಸ್ಥೆಯಲ್ಲ. ಶೇ.40 ರಷ್ಟು ಕಮಿಷನ್ ನಡೆದಿಲ್ಲ ಎಂದು ಲೋಕಾಯುಕ್ತರು ಈಗಾಗಲೇ ವರದಿ ನೀಡಿದೆ ಎಂದು ಅಶೋಕ್ ತಿಳಿಸಿದರು.