ಮಂಗಳೂರು: ಮಂಗಳೂರಿನಲ್ಲಿ ನೆರೆಮನೆಯ ವ್ಯಕ್ತಿ ಜೊತೆಗಿನ ದೀರ್ಘಕಾಲದ ಜಗಳಕ್ಕೆ ಅಂತ್ಯವಾಡಲು ಮುಂದಾದ BSNL ಉದ್ಯೋಗಿ ಆತನನ್ನು ಕಾರು ಡಿಕ್ಕಿ ಹೊಡೆಸಿ ಕೊಲ್ಲಲು ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ. ಈ ಅಪಘಾತದಲ್ಲಿ ಕಾರು ಗುದ್ದಿದ ರಭಸಕ್ಕೆ ಕಾಂಪೌಂಡ್ ಗೋಡೆಯಲ್ಲಿ ತಲೆಕೆಳಗಾಗಿ ನೇತಾಡಿದ್ದರು. ನಂತರ ಸ್ಥಳೀಯರು ಅವರನ್ನು ರಕ್ಷಿಸಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೈಕ್ ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ BSNL ಉದ್ಯೋಗಿ 69 ವರ್ಷದ ಸತೀಶ್ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ. ಮಾರ್ಚ್ 13ರಂದು ಬಿಜೈ ಕಾಪಿಕಾಡ್‌ನ 6ನೇ ಮುಖ್ಯ ರಸ್ತೆಯಲ್ಲಿ ಬೆಳಿಗ್ಗೆ 8.15ರ ಸುಮಾರಿಗೆ ಮುರಳಿ ಪ್ರಸಾದ್ ತಮ್ಮ ಬೈಕ್ನಲ್ಲಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮುರಳಿ ಪ್ರಸಾದ್ ಬೈಕ್ ನಲ್ಲಿ ಬರುವುದನ್ನೇ ಕಾರಿನಲ್ಲಿ ಕುಳಿತು ಕಾಯುತ್ತಿದ್ದ ಸತೀಶ್ ಕುಮಾರ್, ಅತಿ ವೇಗದಲ್ಲಿ ಮುರಳಿ ಪ್ರಸಾದ್ ಕಡೆಗೆ ವೇಗವಾಗಿ ಬಂದು ಕೊಲ್ಲುವ ಉದ್ದೇಶದಿಂದ ಅವರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಅಪಘಾತದ ಪರಿಣಾಮವಾಗಿ ಪಾದಚಾರಿ ಮಹಿಳೆಯೊಬ್ಬರು ಡಿಕ್ಕಿ ಹೊಡೆದು ರಕ್ತಸ್ರಾವವಾಗಿದೆ. ಮುರಳಿ ಪ್ರಸಾದ್ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ನಂತರ, ಪೊಲೀಸರು ಸತೀಶ್ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿ ಅವರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಕೊಲೆ ಯತ್ನ ಆರೋಪದಡಿಯಲ್ಲಿ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿರ್ಲಕ್ಷ್ಯದ ಚಾಲನೆ ಮತ್ತು ಪಾದಚಾರಿಗೆ ಗಾಯಗೊಳಿಸಿದ ಆರೋಪದ ಮೇಲೆ ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.