ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ದಂಧೆಗೆ ಕರ್ನಾಟಕ ಪೊಲೀಸ್ ಪ್ರೋಟೋಕಾಲ್ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ನ್ಯಾಯಾಲಯಕ್ಕೆ ತಿಳಿಸಿದೆ.
ರನ್ಯಾ ರಾವ್ ಜಾಮೀನು ಅರ್ಜಿ ವಿಚಾರಣೆ ವೇಳೆ, ಬಂಧಿತ ನಟಿ ಈ ವರ್ಷದ ಜನವರಿಯಿಂದ 27 ಬಾರಿ ದುಬೈಗೆ ಪ್ರಯಾಣಿಸಿದ್ದಾರೆ ಎಂದು ಡಿಆರ್‌ಐ ಅಧಿಕಾರಿಗಳ ಪರವಾಗಿ ಮಧು ಎನ್. ರಾವ್ ಅವರು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದರು.
ರನ್ಯಾ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಿಜಿಪಿ ರಾಂಕ್ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರ ಮಲಮಗಳು.
"ಇಲ್ಲಿಯವರೆಗಿನ ತನಿಖೆಯ ವೇಳೆ, ಚಿನ್ನ ಕಳ್ಳಸಾಗಣೆಯಲ್ಲಿ ಅತ್ಯಾಧುನಿಕ ಭದ್ರತೆಯನ್ನು ಬೈಪಾಸ್ ಮಾಡಲು ರಾಜ್ಯ ಪೊಲೀಸ್ ಪ್ರೋಟೋಕಾಲ್ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ. ಪೊಲೀಸ್ ಅಧಿಕಾರಿ, ಕುಟುಂಬದವರಿಗೆ ಸಹಾಯ ಮಾಡಲು ಹೇಳಿದ್ದರು. ರಾಜ್ಯದ ಪೊಲೀಸ್ ಪ್ರೋಟೋಕಾಲ್ ಸರ್ವಿಸ್ ಸಹಾಯದಿಂದಲೇ ಸ್ಮಗ್ಲಿಂಗ್ ನಡೆದಿದೆ ಎಂಬುದು ನಮ್ಮ ಆರೋಪ. ಇಲ್ಲವಾದರೆ ರನ್ಯಾ ರಾವ್ ಗ್ರೀನ್ ಚಾನಲ್‌ವರೆಗೂ ಬರುವುದು ಅಸಾಧ್ಯವಾಗಿತ್ತು’ ಎಂದು ವಾದ ಮಾಡಲಾಗಿದೆ.
ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಅವರು, ಡಿಆರ್‌ಐನ ಈ ವಾದವನ್ನು ಪರಿಗಣಿಸಿ ಶುಕ್ರವಾರ ರನ್ಯಾಗೆ ಜಾಮೀನು ನಿರಾಕರಿಸಿದ್ದಾರೆ.
ಅಂತರರಾಷ್ಟ್ರೀಯ ಸಂಪರ್ಕಗಳನ್ನು ಪರಿಶೀಲಿಸಲು ಹೆಚ್ಚಿನ ತನಿಖೆಯ ಅಗತ್ಯ ಇದೆ ಮತ್ತು ಕಸ್ಟಡಿಯಲ್ಲಿ ತನಿಖೆಯ ಸಮಯದಲ್ಲಿ ರನ್ಯಾ ಸಹಕರಿಸಲಿಲ್ಲ ಎಂದು ಡಿಆರ್‌ಐ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್‌ಐ ಅಧಿಕಾರಿಗಳು ಹಿರಿಯ ಪೊಲೀಸ್ ಅಧಿಕಾರಿಗೆ ಸಮನ್ಸ್ ನೀಡಿದ್ದಾರೆ. ಏರ್ ಪೋರ್ಟ್ನಲ್ಲಿ ನೇಮಕ ಆಗಿದ್ದ ನಾಲ್ವರು ಪ್ರೋಟೋಕಾಲ್ ಅಧಿಕಾರಿಗಳನ್ನ ಸಹ ವಿಚಾರಣೆ ಮಾಡಲಾಗಿದೆ. ರನ್ಯಾ ರಾವ್ ಬರುವಾಗ ಸೆಕ್ಯುರಿಟಿ ಕ್ಲಿಯರೆನ್ಸ್ ಮಾಡಲು ಹೇಳಿದ್ದರು. ಗ್ರೀನ್ ಚಾನೆಲ್ ಮೂಲಕ ಹೊರತರಲು ಸೂಚನೆ ನೀಡಿದ್ದರು. ಹಿರಿಯ ಅಧಿಕಾರಿ ಸೂಚನೆಯಂತೆ ನಾವು ನಮ್ಮ ಕೆಲಸ ಮಾಡಿದ್ದೇವೆ ಎಂದಿದ್ದಾರೆ. ಇದರಿಂದ ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ಅಧಿಕಾರಿಗಳು ಕರ್ತವ್ಯ ಲೋಪ ಮಾಡಿರೋದು ಬೆಳಕಿಗೆ ಬಂದಿದೆ ಎಂದು ಡಿಆರ್‌ಐ ತಿಳಿಸಿದೆ.
ಸಾಮಾನ್ಯವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಸಂಬಂಧಿಗಳು ಬರುವಾಗ ಪ್ರೊಟೋಕಾಲ್ಗೆ ಕರೆ ಮಾಡುತ್ತಾರೆ. ಹೀಗೆ ಪದೇ ಪದೇ ಪ್ರೊಟೋಕಾಲ್ಗೆ ಕರೆ ಮಾಡಿರುವ ಪೊಲೀಸ್ ಅಧಿಕಾರಿಗಳ ಲಿಸ್ಟ್ ಮಾಡಲಾಗಿದೆ. ಗೋಲ್ಡ್ ಸ್ಮಗ್ಲಿಂಗ್ ಮಾಡಿರುವ ರನ್ಯಾ ರಾವ್ಗೆ ಪ್ರೋಟೋಕಾಲ್ ನೀಡಲು ಕೇವಲ ಒಬ್ಬ ಪೊಲೀಸ್ ಅಧಿಕಾರಿ ಮಾತ್ರ ಕರೆ ಮಾಡಿಲ್ಲ. 3- 4 ಜನ ಅಧಿಕಾರಿಗಳು ರನ್ಯಾಗೆ ಪ್ರೋಟೋಕಾಲ್ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ.