ಬೆಂಗಳೂರು: ಹೋಳಿ ಹಬ್ಬ ಆಚರಣೆ ಘರ್ಷಣೆಯಲ್ಲಿ ಕೊನೆಯಾದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಸ್ಯಕಾಶಿ ಎಂದು ಜನಪ್ರಿಯವಾದ ಲಾಲ್ ಬಾಗ್ ನಲ್ಲಿ ಮೊನ್ನೆ ಎರಡು ಗುಂಪಿನ ಯುವಕ-ಯುವತಿಯರು ಸೇರಿ ಹೋಳಿ ಆಚರಣೆಯಲ್ಲಿ ತೊಡಗಿತು. ಆರಂಭದಲ್ಲಿ ಪರಸ್ಪರ ಬಣ್ಣ ಎರಚುತ್ತಾ ಖುಷಿಯಿಂದ ವಿನೋದ ಮಾಡುತ್ತಿದ್ದರು.
ಘರ್ಷಣೆಗೆ ನಿಖರ ಕಾರಣ ಏನೆಂದು ತಿಳಿದುಬರದಿದ್ದರೂ ಕೂಡ ಸ್ಥಳೀಯರು ಮತ್ತು ಅಧಿಕಾರಿಗಳು ಹೇಳುವ ಪ್ರಕಾರ ರಹಸ್ಯ ವಿಷಯವೊಂದನ್ನು ಒಂದು ಗುಂಪಿನವರು ಬಹಿರಂಗಪಿಸಿದ್ದಕ್ಕೆ ಆಕ್ಷೇಪ ಎತ್ತಿದರು. ಪರಸ್ಪರ ವಾಕ್ಸಮರದಿಂದ ಆರಂಭವಾಗಿ ನಂತರ ಕೈಕೈ ಮಿಲಾಯಿಸಿಕೊಳ್ಳುವ ಹಂತ ತಲುಪಿತು.
ಕೂಡಲೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ಘಟನೆಯಲ್ಲಿ ಎರಡು ಗುಂಪುಗಳ ಮಧ್ಯೆ ಯಾವುದೇ ಗಂಭೀರ ಗಾಯಗಳಾಗದಿದ್ದರೂ ಕೂಡ ಈ ರೀತಿ ಸಾರ್ವಜನಿಕವಾಗಿ ಸೇರುವ ಸ್ಥಳಗಳಲ್ಲಿ ಇಂತಹ ಘಟನೆಗಳಾಗುವುದು ಕಾನೂನು ಸುವ್ಯವಸ್ಥೆ ಇಲ್ಲದಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.
ಲಾಲ್ ಬಾಗ್ ಠಾಣೆ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದು ಘಟನೆಗೆ ನಿಖರ ಕಾರಣ ಮತ್ತು ಘರ್ಷಣೆಗೆ ಕಾರಣರಾದವರನ್ನು ಪತ್ತೆ ಹಚ್ಚುತ್ತಿದ್ದಾರೆ.
ವಲಸೆ ನಿಲ್ಲಿಸಿ ಜನರ ಒತ್ತಾಯ
ಬೆಂಗಳೂರಿಗೆ ಬೇರೆ ಕಡೆಯಿಂದ ವಲಸೆ ಬರುವವರನ್ನು ತಡೆಯಬೇಕು, ಇಲ್ಲದಿದ್ದರೆ ಇಂತಹ ಘಟನೆ ಆಗುತ್ತಿರುತ್ತವೆ ಎನ್ನುತ್ತಾರೆ ಪತ್ರಕರ್ತ ಎಸ್ ಶ್ಯಾಮ್ ಪ್ರಸಾದ್.