ಬೆಳಗಾವಿ: ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದಲ್ಲಿ ಸೋಮವಾರ ನಾಲ್ವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಕೆಲವು ದಿನಗಳ ಹಿಂದೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಜಿಲ್ಲೆಯ ಸವಗಾಂವ್ ಗ್ರಾಮದ ನಿವಾಸಿ ಅಲ್ಲಾವುದ್ದೀನ್ ಪಿರ್ಜಾದೆ ದೂರು ಸಲ್ಲಿಸಿದ್ದು, ಬಂಧಿತರನ್ನು ಸತೀಶ್ ಜಾಧವ್, ಸುಮಿತ್, ವೀರೇಶ್ ಮತ್ತು ಇನ್ನೊಬ್ಬ ವ್ಯಕ್ತಿ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಗ್ರಾಮದ ಹೊರವಲಯದಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಹುಡುಗಿಯ ಜೊತೆ ಮಾತನಾಡಿದ್ದಕ್ಕಾಗಿ ಅಲ್ಲಾವುದ್ದೀನ್ ಮೇಲೆ ಗುಂಪು ಹಲ್ಲೆ ನಡೆಸಿದೆ. ಆತನನ್ನು ಥಳಿಸಿದ ನಂತರ, ಮತ್ತೆ ಆ ಹುಡುಗಿ ಜೊತೆ ಮಾತನಾಡುತ್ತಿರುವುದು ಕಂಡುಬಂದರೆ, ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ. ನಂತರ ಅಲ್ಲಾವುದ್ದೀನ್ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ರಕ್ಷಣೆ ನೀಡುವಂತೆ ಕೋರಿದ್ದಾರೆ.
ಗುಂಪು ದಾಳಿ ನಡೆಸಿದ ನಂತರ ಅಲ್ಲಾವುದ್ದೀನ್ ಹರಿದ ಬಟ್ಟೆಗಳೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನೂ ಹೊರಬರಬೇಕಿದೆ.