ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಸೇರಿರುವ ಕನ್ನಡ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯನ್ನು ಮಾರ್ಚ್ 19ಕ್ಕೆ ಮುಂದೂಡಲಾಗಿದೆ. ಸಿಸಿಎಚ್ 64ನೇ ನ್ಯಾಯಾಲಯ ಇಂದು ಪ್ರಕರಣ ವಿಚಾರಣೆ ನಡೆಸಿದ್ದು ಮುಂದಿನ ವಿಚಾರಣೆಗೂ ಮುನ್ನ ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (DRI) ತನ್ನ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದೆ. ಆಕ್ಷೇಪಣೆ ಸಲ್ಲಿಸಿದ ನಂತರ ಮುಂದಿನ ಪ್ರಕ್ರಿಯೆಗಳು ಮುಂದುವರಿಯುತ್ತವೆ.
ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಕಳೆದ ವಾರ ರನ್ಯಾ ರಾವ್ ಅವರ ಹಿಂದಿನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ನಟಿಯ ವಿರುದ್ಧದ ಗಂಭೀರ ಆರೋಪಗಳನ್ನು ಉಲ್ಲೇಖಿಸಿ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಅವರ ಪತಿ ಜತಿನ್ ಹುಕ್ಕೇರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿದ್ದ ತನ್ನ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ.
ಏತನ್ಮಧ್ಯೆ, ಪ್ರಕರಣದ ಎರಡನೇ ಆರೋಪಿ ಹೋಟೆಲ್ ಉದ್ಯಮಿ ತರುಣ್ ರಾಜುಗೆ 15 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ. ಭಾರತದೊಳಗೆ ಚಿನ್ನದ ಸಾಗಣೆ ಮತ್ತು ವಿತರಣೆಯ ಲಾಜಿಸ್ಟಿಕ್ಸ್ ಅನ್ನು ನಿರ್ವಹಿಸುವ ಮೂಲಕ ಕಳ್ಳಸಾಗಣೆ ಕಾರ್ಯಾಚರಣೆಯನ್ನು ಸುಗಮಗೊಳಿಸುವಲ್ಲಿ ರಾಜು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ಮಲಮಗಳು ರನ್ಯಾ ರಾವ್ ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮಾರ್ಚ್ 3ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಅವರ ಬಳಿಯಿಂದ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ವಿದೇಶಿ ಮೂಲದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡ ನಂತರ ಆಕೆಯನ್ನು ಬಂಧಿಸಿದ್ದರು.
ನಟಿಯ ಬಂಧನದ ನಂತರ, ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ರೂ. ನಗದು ಪತ್ತೆಯಾಗಿತ್ತು. ತನಿಖಾಧಿಕಾರಿಗಳು ನಟಿ ದೊಡ್ಡ ಕಳ್ಳಸಾಗಣೆ ಜಾಲದ ಭಾಗವಾಗಿದ್ದರು ಎಂದು ಶಂಕಿಸಿದ್ದಾರೆ. ರಾವ್ ಮತ್ತು ರಾಜು ಇಬ್ಬರ ಮೇಲೂ ಕಸ್ಟಮ್ಸ್ ಕಾಯ್ದೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.