ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯಪಾಲರನ್ನು ಭೇಟಿ ಮಾಡಿ ಬಿಲ್‌ಗೆ ಸಹಿ ಹಾಕದಂತೆ ಬಿಜೆಪಿ ನಿಯೋಗ ಮನವಿ ಸಲ್ಲಿಸಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ಮಸೂದೆಗೆ ಸಹಿ ಹಾಕದಂತೆ ಮನವಿ ಮಾಡಿದರು. ಈ ಮಧ್ಯೆ, ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡುವ ವಿಧೇಯಕಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ರಾಜ್ಯಪಾಲ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ. ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿರುವ ಮಸೂದೆಗೆ ಒಪ್ಪಿಗೆ ನೀಡದಂತೆ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಯತ್ನಾಳ್ ಮನವಿ ಮಾಡಿದ್ದಾರೆ.
ರಾಮನಗರ ಜಿಲ್ಲೆ ಮರುನಾಮಕರಣದ ವಿಷಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗೆ ಭಾರಿ ಹಿನ್ನಡೆಯುಂಟಾಗಿದೆ. ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಗೃಹ ಇಲಾಖೆ ತಿರಸ್ಕರಿಸಿದೆ. ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡುವ ಪ್ರಸ್ತಾವನೆಗೆ 2024 ರ ಜುಲೈ ನಲ್ಲಿ ರಾಜ್ಯ ಸಂಪುಟ ಸಭೆ ಅನುಮೋದನೆ ನೀಡಿತ್ತು. ರಾಮನಗರ ಮರುಣಾಮಕರಣ ಪ್ರಸ್ತಾವನೆಯನ್ನು ಮೊದಲು ಡಿಕೆ ಶಿವಕುಮಾರ್ ಮುಂದಿಟ್ಟಿದ್ದರು. ಈ ಪ್ರಸ್ತಾವನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿ ಅದನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಲಾಗಿತ್ತು. ಕೇಂದ್ರ ಗೃಹ ಸಚಿವಾಲಯ ಎರಡು ತಿಂಗಳ ಹಿಂದೆ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಈ ಪ್ರಸ್ತಾವನೆಯನ್ನು ಮುಂದುವರಿಸದಂತೆ ತಿಳಿಸಿದೆ. ಕಾನೂನಿನ ಪ್ರಕಾರ, ಜಿಲ್ಲೆ ಅಥವಾ ಸ್ಥಳದ ಮರುನಾಮಕರಣವು ರಾಜ್ಯದ ವಿಷಯವಾಗಿದೆ ಮತ್ತು ಕೇಂದ್ರದ ಒಪ್ಪಿಗೆಯ ಅಗತ್ಯವಿಲ್ಲ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.
ನಟಿ ರನ್ಯಾ ರಾವ್ ಮತ್ತು ಅವರ ತಂದೆ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ವಿರುದ್ಧ ಮಾಧ್ಯಮಗಳು ಮಾನಹಾನಿಕರ ವಿಷಯಗಳನ್ನು ಪ್ರಸಾರ ಮಾಡುವುದನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಿ ತನಿಖೆ ಇತ್ಯಾದಿ ಕಾನೂನು ಪ್ರಕ್ರಿಯೆಗಳು ನಡೆಯುತ್ತಿರುವ ಮಧ್ಯೆ ಹೈಕೋರ್ಟ್ ಈ ಆದೇಶ ನೀಡಿದೆ. ಈ ಮಧ್ಯೆ, ರನ್ಯಾ ರಾವ್ ಅವರ ವಿರುದ್ಧ ಅಶ್ಲೀಲ ಪದ ಬಳಸಿದ ಆರೋಪದ ಮೇಲೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಮಂಗಳವಾರ ದೂರು ದಾಖಲಾಗಿದೆ. ಮತ್ತೊಂದು ಬೆಳವಣಿಗೆಯಲ್ಲಿ ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ತರುಣ್ ರಾಜು ಅವರಿಗೆ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಬುಧವಾರ ಜಾಮೀನು ನಿರಾಕರಿಸಿದೆ. ನಟಿ ರನ್ಯಾ ರಾವ್ ಸ್ನೇಹಿತ ತರುಣ್ ರಾಜು ಸಲ್ಲಿಸಿದ್ದ ಜಾಮೀನು ಅರ್ಜಿಗೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ ಡಿಆರ್‌ಐ ಪರ ವಿಶೇಷ ಸರಕಾರಿ ಅಭಿಯೋಜಕರು ರನ್ಯಾ ಹಾಗೂ ತರುಣ್ ನಡುವಣ ಚಿನ್ನ ಸ್ಮಗ್ಲಿಂಗ್, ನಿರಂತರ ದುಬೈ ಪ್ರಯಾಣದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದರು.
ಲಂಚ ನೀಡಲು ನಿರಾಕರಿಸಿದ ಸವಾರನ ಮೇಲೆ ಹಲ್ಲೆ ನಡೆಸಿದ್ದ ವಿಜಯನಗರ ಸಂಚಾರ ಪೊಲೀಸ್ ಠಾಣೆಗೆ ಸೇರಿದ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್'ರನ್ನು ಅಮಾನತುಗೊಳಿಸಲಾಗಿದೆ. ಜಿಟಿ ಮಾಲ್ ಬಳಿ ಕುಡಿದು ವಾಹನ ಚಲಾಯಿಸಿದ್ದ ಬೈಕ್ ಸವಾರನನ್ನು ತಡೆದಿದ್ದ ಪೊಲೀಸರು, 10,000 ರೂ. ದಂಡ ಪಾವತಿಸವಂತೆ ಸೂಚಿಸಿದ್ದರು. ಈ ದಂಡ ತಪ್ಪಿಸಬೇಕಾದರೆ ರೂ.3,000 ಹಣ ನೀಡುವಂತೆ ಸೂಚಿಸಿದ್ದರು. ಈ ವೇಳೆ ಗೂಗಲ್ ಪೇ ಮೂಲಕ ಪಾವತಿಸಲು ಸವಾರ ಮುಂದಾದಾಗ ನಗದು ರೂಪದಲ್ಲಿ ಪಾವತಿಸುವಂತೆ ಒತ್ತಾಯಿಸಿದ್ದರು. ಇದಕ್ಕೆ ಒಪ್ಪದ ಸವಾರ ನ್ಯಾಯಾಲಯದಲ್ಲಿ ದಂಡ ಪಾವತಿಸಿ, ಬೈಕ್ ಮರಳಿ ಪಡೆಯಲು ಠಾಣೆಗೆ ಹೋಗಿದ್ದ. ಈ ವೇಳೆ ಪೊಲೀಸರು ಹಲ್ಲೆ ನಡೆಸಿದ್ದಾರೆಂದು ಸವಾರ ಆರೋಪಿಸಿದ್ದರು. ಘಟನೆ ಬಳಿಕ ಹಲ್ಲೆಗೊಳಗಾದ ಸವಾರ ಈಶ್ವರ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೂರಿನ ಆಧಾರದ ಮೇಲೆ, ವಿಚಾರಣೆಯ ನಂತರ, ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.