ಬೆಂಗಳೂರು: 24 ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE)ಹುದ್ದೆಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ಹಸ್ತಾಂತರಿಸುವಂತೆ ರಾಜ್ಯ ಸರ್ಕಾರ, KPSC ಮತ್ತಿತರಿಗೆ ಹೈಕೋರ್ಟ್ ತಾಕೀತು ಮಾಡಿದೆ.
ಈ ಹುದ್ದೆಗಳಿಗೆ ಆಯ್ಕೆಯಾಗಿ ನೇಮಕಗೊಂಡ ಸುಮಾರು 10 ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ರಾಮಚಂದ್ರ ಡಿ.ಹುದ್ದಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.
ಸಿಬಿಐ ತನಿಖೆಯ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ರಾಜ್ಯ ಸರ್ಕಾರ, ಕೆಪಿಎಸ್‌ಸಿ ಮತ್ತು ಆಕಾಂಕ್ಷಿ ಅಭ್ಯರ್ಥಿಗಳು ತಮ್ಮ ಅಹವಾಲು ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ವಿಚಾರಣೆಯ ಸಂದರ್ಭದಲ್ಲಿ ಚರ್ಚಿಸಲಾದ ಹಲವಾರು ಪ್ರಶ್ನೆಗಳಿಗೆ, ವಿಶೇಷವಾಗಿ ಸಿಬಿಐ ತನಿಖೆಗೆ ಆದೇಶಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಸರ್ಕಾರದಿಂದ ಉತ್ತರಗಳನ್ನು ಕೇಳಿದೆ. ಎಇಇ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳು ಕೆಪಿಎಸ್‌ಸಿಯ ಕೆಲವು ಅಧಿಕಾರಿಗಳು ಮತ್ತು ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿರುವವರ ದುರ್ವರ್ತನೆಯನ್ನು ಸೂಚಿಸುತ್ತವೆ ಎಂದು ಹೈಕೋರ್ಟ್ ಹೇಳಿದೆ.
2024, ಫೆಬ್ರವರಿ 22ರ ಕೆಪಿಎಸ್‌ಸಿಯ ಪತ್ರ ಮತ್ತು ಮೇ 18, 2024 ರಂದು ಜ್ಞಾಪನೆ (reminder) ಪತ್ರದ ಹೊರತಾಗಿಯೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಜೂನ್ 25,2024 ರಂದು ನೇಮಕಾತಿ ಪತ್ರಗಳನ್ನು ಏಕೆ ನೀಡಲಾಗಿದೆ ಎಂಬುದರ ಕುರಿತು ಸರ್ಕಾರದಿಂದ ಪ್ರತಿಕ್ರಿಯೆ ನೀಡುವಂತೆ ಅಡ್ವೊಕೇಟ್ ಜನರಲ್‌ಗೆ ನ್ಯಾಯಾಲಯ ಸೂಚಿಸಿದೆ.
ಅಲ್ಲದೇ ಕೆಲವು ಅಭ್ಯರ್ಥಿಗಳು OMR ಶೀಟ್‌ಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಸೇರಿದಂತೆ ಆಯ್ಕೆ ಪ್ರಕ್ರಿಯೆಯಲ್ಲಿ ವಂಚನೆಯ ಪ್ರಾಥಮಿಕ ಸಾಕ್ಷ್ಯದ ನಂತರವೂ ಸರ್ಕಾರ ಮತ್ತು KPSC ಇನ್ನೂ ಏಕೆ ಕ್ರಿಮಿನಲ್ ದೂರು ದಾಖಲಿಸಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿದೆ.