ಬೆಂಗಳೂರು: ಪ್ರೀತಿಗೆ ನೆರವು ನೀಡುತ್ತಿದ್ದ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರು ಯುವಕನ ಮೇಲೆ ಹಾಗೂ ಆತನ ರಕ್ಷಣೆಗೆ ಬಂದ ಸಹೋದರನ ಮೇಲೂ ಹಲ್ಲೆ ನಡೆಸಿರುವ ಘಟನೆಯೊಂದು ಹುಣಸೂರಿನಲ್ಲಿ ಭಾನುವಾರ ನಡೆದಿದೆ.
ಬಿಳಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರವಣನಹಳ್ಳಿ ಗ್ರಾಮದ ನಿವಾಸಿ ಚೆಲವರಾಜು ಎಂಬುವವರ ಪುತ್ರಿ ಲಕ್ಷ್ಮೀ ಎಂಬಾಕೆ ಇದೇ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಇವರ ಪ್ರೀತಿಗೆ ಇದೇ ಗ್ರಾಮದ ನಿವಾಸಿ ಘನವಂತ್ ನೆರವು ನೀಡುತ್ತಿದ್ದು, ಈ ವಿಚಾರ ತಿಳಿದು ಯುವಕ ಹಾಗೂ ಆತನ ಸಹೋದರ ಮೇಲೆ ಯುವತಿಯ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಈ ಹಿಂದೆಯೂ ಚೆಲುವರಾಜು ಅವರು ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಗ್ರಾಮದ ಮುಖಂಡರು ಸಭೆ ನಡೆಸಿ ರಾಜಿ ಸಂಧಾನ ಮಾಡಿಸಿದ್ದರು. ಕೆಲ ತಿಂಗಳುಗಳ ಹಿಂದಷ್ಟೇ ಚೆಲುವರಾಜು ಪುತ್ರಿಗೆ ದೂರದ ಸಂಬಂಧಿಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾನೆ. ಆದರೂ ಯುವಕನ ಮೇಲಿನ ದ್ವೇಷ ಬಿಡದೆ ಎದುರಿಗೆ ಸಿಕ್ಕಾಗಲೆಲ್ಲಾ ಹಲ್ಲೆ ನಡೆಸಿದ್ದ ಎನ್ನಲಾಗಿದೆ.
ಶನಿವಾರ ಘನವಂತ್ ತನ್ನ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಚೆಲುವರಾಜು ಮತ್ತು ಅವರ ಗುಂಪು ಮತ್ತೆ ಹಲ್ಲೆ ನಡೆಸಿದೆ ಎಂದು ಯುವಕ ಪೊಲೀಸರಿಗೆ ದೂರು ನೀಡಿದ್ದಾರೆ.
ಆತನ ರಕ್ಷಣೆಗೆ ಧಾವಿಸಿದ್ದ ಅಣ್ಣ ಯಶವಂತ್ ಮೇಲೂ ಹಲ್ಲೆ ನಡೆಸಿದ್ದಾರೆ. ಇಬ್ಬರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡೆವು ಎಂದು ತಿಳಿಸಿದ್ದಾರೆ.
ಘಟನೆ ಬಳಿಕ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಯುವಕ ದೂರು ದಾಖಲಿಸಿದ್ದಾನೆ. ಹಲ್ಲೆ ಹಿನ್ನೆಲೆಯಲ್ಲಿ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.