ಬೆಂಗಳೂರು: ಬಾಲಕಿಯನ್ನು ಚುಡಾಯಿಸಿದ್ದಕ್ಕೆ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯೊಂದು ಗಂಗೊಂಡನಹಳ್ಳಿಯಲ್ಲಿ ಕಳೆದ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಾರ್ಚ್ 17 ರಂದು ಗಂಗೊಂಡನಹಳ್ಳಿಯ 1 ನೇ ಕ್ರಾಸ್‌ನಲ್ಲಿ ರಾತ್ರಿ 8.30 ರಿಂದ 9 ಗಂಟೆಯ ನಡುವೆ ಘಟನೆ ನಡೆದಿದ್ದು, ಥಳಿತಕ್ಕೊಳಗಾದ ಬಾಲಕರು ಇದೀಗ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬೆನ್ನಲ್ಲೇ ಬಾಲಕನೊಬ್ಬನ ತಂದೆ ಎ.ಶಬ್ಬೀರ್ ಎಂಬುವವದು, ಸುಫಿಯಾನ್, ಜುಬೈರ್ ಮತ್ತು ಇತರ ಮೂವರ ವಿರುದ್ಧ ಚಂದ್ರಾ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ.
ಶಬ್ಬೀರ್ ಆಟೋ ಚಾಲಕನಾಗಿದ್ದರೆ, ಇನ್ನೊಬ್ಬ ಬಾಲಕನ ತಂದೆ ಅಕ್ಬರ್ ಮೆಕ್ಯಾನಿಕ್ ಆಗಿದ್ದಾರೆ. ಎರಡೂ ಕುಟುಂಬ ಗಂಗೊಂಡನಹಳ್ಳಿಯಲ್ಲಿ ವಾಸವಿದೆ ಎಂದು ತಿಳಿದುಬಂದಿದೆ.
ಬಾಲಕಿಯನ್ನು ಚುಡಾಯಿಸಿದ ಹಿನ್ನೆಲೆಯಲ್ಲಿ ಐವರು ಪುರುಷರಿದ್ದ ಗುಂಪು ಬಾಲಕರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಥಳಿಸಿದ್ದಾರೆ. ಅಲ್ಲದೆಯ ವಿಡಿಯೋವನ್ನೂ ಮೊಬೈಲ್ ನಲ್ಲಿ ಸೆರೆಹಿಡಿದ್ದು, ಬಾಲಕರು ಬಿಟ್ಟು ಬಿಡುವಂತೆ ಬೇಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಮ್ಮ ಮಕ್ಕಳಿಗೆ ಯಾವ ಕಾರಣಕ್ಕೆ ಹೊಡೆದಿದ್ದಾರೆಂಬುದು ತಿಳಿದಿಲ್ಲ. ನೋವಿನ ನಡುವಲ್ಲೇ ನಮ್ಮ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾರೆಂದು ಶಬ್ಬೀರ್ ಅವರು ಹೇಳಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧನಕ್ಕೊಳಪಡಿಸಿದ್ದು, ಉಳಿದ ಇಬ್ಬರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.