ರಾಮನಗರ ಜಿಲ್ಲೆ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಸಚಿವ ಎಚ್. ಡಿ. ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರು 71 ಎಕರೆ 30 ಗಂಟೆ ಗೋಮಾಳ ಜಮೀನನನ್ನು ಒತ್ತುವರಿ ಮಾಡಿಕೊಂಡಿರುವುದಾಗಿ ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್. ಆರ್. ಹಿರೇಮಠ ಆರೋಪಿಸಿದ್ದಾರೆ. ಕುಮಾರಸ್ವಾಮಿ, ಡಿ. ಸಿ. ತಮ್ಮಣ್ಣ, ಸಂಸದ ಡಾ. ಸಿ.ಎನ್. ಮಂಜುನಾಥ್ ಸೇರಿದಂತೆ ಕುಟುಂಬದ ಇತರ ಸದಸ್ಯರು ಒತ್ತುವರಿ ಮಾಡಿಕೊಂಡಿರುವ 71 ಎಕರೆ 30 ಗುಂಟೆ ಗೋಮಾಳವನ್ನು ಸರ್ಕಾರ ತಕ್ಷಣ ವಶಕ್ಕೆ ಪಡೆಯಬೇಕು. ಅವರೆಲ್ಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಒತ್ತುವರಿಗೆ ನೆರವಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿರೇಮಠ ಒತ್ತಾಯಿಸಿದ್ದಾರೆ.
ಸತತ 5ನೇ ಬಾರಿಗೆ ಬಿಬಿಎಂಪಿ ಅಧಿಕಾರಿಗಳೇ BBMP Budget 2025-26 ಅನ್ನು ಮಂಡನೆ ಮಾಡಿದ್ದು, ಹಾಲಿ ಬಜೆಟ್‌ನಲ್ಲಿ 20 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಘೋಷಿಸಲಾಗಿದೆ. ರಾಜ್ಯ ಸರ್ಕಾರದ ಗ್ರೇಟರ್ ಬೆಂಗಳೂರು ರಚನೆಗೂ ಮುನ್ನ ಮಂಡಿಸುತ್ತಿರುವ ಬಿಬಿಎಂಪಿಯ ಕೊನೆಯ ಬಜೆಟ್ ಮಂಡನೆ ಇದಾಗಿದ್ದು, ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್‌ಕುಮಾರ್ ಬಿಬಿಎಂಪಿ ಬಜೆಟ್ ಮಂಡಿಸಿದರು. ಪಾಲಿಕೆ ಇತಿಹಾಸದಲ್ಲೇ ಇದು ಅತ್ಯಂತ ಬೃಹತ್ ಗಾತ್ರದ ಬಜೆಟ್ ಇದಾಗಿದ್ದು, ಇದುವರೆಗೆ ಪಾಲಿಕೆ 12 ರಿಂದ 13 ಸಾವಿರ ಕೋಟಿ ವರೆಗೆ ಬಜೆಟ್ ಮಂಡಿಸಿದೆ. ಬಿಬಿಎಂಪಿ ಬಜೆಟ್ನ ಶೇಕಡಾ 65% ರಷ್ಟು ಹಣವನ್ನ ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಮೀಸಲಿಡಲಾಗಿದೆ.
20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಅಪಹರಿಸಿದ ಆರೋಪದ ಮೇಲೆ ಆಕೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಉಡುಪಿಯಲ್ಲಿ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಮೂಡುಬಿದಿರೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ತನ್ನ ಮಗಳನ್ನು ಉಡುಪಿಯ ಅಕ್ರಮ್ ಮೊಹಮ್ಮದ್ ಎಂಬಾತ ಕುಕ್ಕಿಕಟ್ಟೆ ಜಂಕ್ಷನ್‌ನಲ್ಲಿ ಕಾಲೇಜು ಬಸ್‌ನಿಂದ ಇಳಿದು ತನ್ನ ಚಿಕ್ಕಮ್ಮನ ಮನೆಗೆ ನಡೆದು ಹೋಗುತ್ತಿದ್ದಾಗ ಸ್ಕೂಟರ್ ನಲ್ಲಿ ಅಪಹರಿಸಿದ್ದಾನೆ ಎಂದು ಗಾಡ್ವಿನ್ ದೇವದಾಸ್ ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆಯನ್ನು ಕಂಡ ಬಸ್ ಚಾಲಕ ದೇವದಾಸ್ ಗೆ ವಿಷಯ ತಿಳಿಸಿದ್ದಾರೆ. ತನ್ನ ಮಗಳು ಅಪ್ರಾಪ್ತಳಾಗಿದ್ದಾಗ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮೊಹಮ್ಮದ್ ವಿರುದ್ಧ ಈ ಹಿಂದೆ ದೂರು ದಾಖಲಿಸಿದ್ದೆ. ಇದರ ಸೇಡು ತೀರಿಸಿಕೊಳ್ಳಲು ಈಗ ಆಕೆಯನ್ನು ಅಪಹರಿಸಲಾಗಿದೆ ಎಂದು ದೇವದಾಸ್ ಆರೋಪಿಸಿದ್ದು ಇದು ಲವ್ ಜಿಹಾದ್ ನ ಹಿನ್ನೆಲೆಯಲ್ಲಿ ನಡೆದ ಕೃತ್ಯವಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳಿಂದ ಆಗಾಗ ಆಕ್ಷೇಪ ವ್ಯಕ್ತವಾಗುತ್ತಲೇ ಇದೆ. ಈಗ ಕಾಂಗ್ರೆಸ್ ಶಾಸಕ, ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಆರ್ವಿ ದೇಶಪಾಂಡೆ ಉಚಿತ ಯೋಜನೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಅಂಬೇವಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಉಚಿತ ಕೊಡುಗೆ ಎಂಬುದು ಅಪಾಯಕಾರಿ ಪದ. ಜನರಿಗೆ ಏನನ್ನೂ ಉಚಿತವಾಗಿ ನೀಡಬಾರದು ಮತ್ತು ಪ್ರತಿಯೊಂದು ಸೇವೆಗೂ ಶುಲ್ಕ ನಿಗದಿಪಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಬಸ್ ಪ್ರಯಾಣವನ್ನು ಆನಂದಿಸುತ್ತಿದ್ದಾರೆ. ಈ ಯೋಜನೆಯನ್ನು ಪುರುಷರಿಗೂ ವಿಸ್ತರಿಸಬೇಕೆಂಬ ಬೇಡಿಕೆ ಇತ್ತು. ಎಲ್ಲವನ್ನೂ ಉಚಿತವಾಗಿ ನೀಡಿದರೆ ನಾವು ಸಾರಿಗೆ ಸಂಸ್ಥೆಗಳನ್ನು ನಡೆಸುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ಟಿಟಿ ವಾಹನ ಪಲ್ಟಿಯಾಗಿ ಮೂವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ. ಶಂಕರಿಬಾಯಿ, ಕುಮಾರ ನಾಯ್ಕ್, ಮತ್ತು ಶ್ವೇತಾ ಮೃತಪಟ್ಟಿದ್ದಾರೆ. ಐವರಿಗೆ ಗಂಭೀರ ಗಾಯಗಳಾಗಿದ್ದು, ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಗ್ಗೆರೆ ಗ್ರಾಮದ ಬಳಿ ಟಿಟಿ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಟಿಟಿ ವಾಹನ ಪಲ್ಟಿ ಹೊಡೆದಿದ್ದು, ಅದರಲ್ಲಿ ಮೂವರು ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.