ತುಮಕೂರು: ತುಮಕೂರಿನಲ್ಲಿ ನಡೆದಿದ್ದ ಶಾರ್ಟ್ ಸರ್ಕ್ಯೂಟ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ದೊರೆತಿದ್ದು, ಸ್ವಂತ ಮಗನೇ ತನ್ನ ತಂದೆಯನ್ನು ಕೊಂದು ಬಳಿಕ ಅದನ್ನು ಶಾರ್ಟ್ ಸರ್ಕ್ಯೂಟ್ ಎಂದು ಬಿಂಬಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 11 ರಂದು ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಶಾಮೀರ್ ಆಸ್ಪತ್ರೆ ಮುಂಭಾಗದ ಐಸ್ ಕ್ರಿಂ ತಯಾರಿಕ ಘಟಕದಲ್ಲಿ ಭಾನುವಾರ ಮಾಲೀಕ ನಾಗೇಶ್ ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದು ಶಾರ್ಟ್ ಸರ್ಕ್ಯೂಟ್ ಸಾವು ಎಂದು ಹೇಳಲಾಗಿತ್ತು. ಆದರೆ ಬಳಿಕ ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ್ದು, ನಾಗೇಶ್ ರನ್ನು ಅವರ ಮಗನೇ ಕೊಂದು ಹಾಕಿದ್ದ ವಿಚಾರ ಬಯಲಿಗೆ ತಂದಿದ್ದಾರೆ.
ಮೇ 11 ರಂದು ನಡೆದ ಕೊಲೆ ಪ್ರಕರಣದ ತನಿಖೆ ಮತ್ತು ಅಪರಾಧ ಸ್ಥಳದಿಂದ ಭದ್ರತಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದ ಪೊಲೀಸರು ಕೊನೆಗೂ ಕೊಲೆ ಪ್ರಕರಣವನ್ನು ಬೇದಿಸಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಶಾಮೀರ್ ಆಸ್ಪತ್ರೆ ಮುಂಭಾಗದ ಐಸ್ ಕ್ರಿಂ ತಯಾರಿಕ ಘಟಕದಲ್ಲಿ ಭಾನುವಾರ ಮಾಲೀಕ ನಾಗೇಶ್ ಮೃತಪಟ್ಟಿದ್ದು, ಸಂಬಂಧಿಗಳು ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಪೊಲೀಸರಿಗೆ ನಾಗೇಶ್ ಮಗ ಸೂರ್ಯ (19) ಮತ್ತು ಸ್ನೇಹಿತ ಸೇರಿ ಕೊಲೆ ಮಾಡಿರುವ ದಾಖಲೆಗಳು ಲಭ್ಯವಾಗಿವೆ. ಪ್ರಸ್ತುತ ಮಗ ಸೂರ್ಯ ಮತ್ತು ಸ್ನೇಹಿತ ಪರಾರಿಯಾಗಿದ್ದು ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಕಪಾಳಮೋಕ್ಷ ಮಾಡಿ, ಚಪ್ಪಲಿಯಲ್ಲಿ ಹೊಡೆಯಲು ಮುಂದಾಗಿದ್ದ ತಂದೆ
ಇನ್ನು ಪೊಲೀಸರು ಸಂಗ್ರಹಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಘಟನೆ ನಡೆದ ದಿನ 55 ವರ್ಷದ ನಾಗೇಶ್ ತನ್ನ ಮಗನಿಗೆ ಕಪಾಳಮೋಕ್ಷ ಮಾಡಿದ್ದರು. ಅಲ್ಲದೆ ಚಪ್ಪಲಿ ತೆಗೆದು ಅದರಿಂದ ಮಗ ಸೂರ್ಯನಿಗೆ ಹೊಡೆಯುತ್ತಾರೆ. ನಂತರ ನಾಗೇಶ್ ಸೂರ್ಯನನ್ನು ಹೊಡೆಯಲು ಕೋಲನ್ನು ಎತ್ತಿಕೊಳ್ಳುತ್ತಾರೆ. ಈ ವೇಳೆ ಮಗ ಸೂರ್ಯ, ಅವನು ತನ್ನ ತಂದೆಯನ್ನು ತಡೆಯಲು ಪ್ರಯತ್ನಿಸುತ್ತಾನೆ.
ಬಳಿಕ ಮಗ ಸೂರ್ಯ ಬಿಳಿ ಬಟ್ಟೆಯಿಂದ ತಂದೆಯ ಕುತ್ತಿಗೆಗೆ ಬಿಗಿದು ಕೊಂದು ಹಾಕುತ್ತಾನೆ. ಈ ವೇಳೆ ಸೂರ್ಯನ ಸ್ನೇಹಿತ ಕೂಡ ಅಲ್ಲಿಯೇ ಇದ್ದು ಬಳಿಕ ನಾಗೇಶ್ ಅವರ ಶವವನ್ನು ಹಾಸಿಗೆ ಮೇಲೆ ಇರಿಸಿ ಅವರ ಬೆರಳುಗಳನ್ನು ಸ್ವಿಚ್ ಬೋರ್ಡ್ ತಾಗಿತಿ ಶಾಕ್ ಹೊಡೆಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಇದೇ ವಿಡಿಯೋ ಇದೀಗ ಅಪರಾಧಿಗಳನ್ನು ಹಿಡಿದುಕೊಟ್ಟಿದ್ದು, ಪ್ರಸ್ತುತ ಕೊಲೆ ಆರೋಪಿ ಸೂರ್ಯನನ್ನು ಬಂಧಿಸಿದ್ದು, ಆತನಿಗೆ ನೆರವು ನೀಡಿದ ಸ್ನೇಹಿತ ಪರಾರಿಯಲ್ಲಿದ್ದಾನೆ. ಅವನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.