ಪಾಕ್ ವಿರುದ್ಧದ ಆಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಬೃಹತ್ ತಿರಂಗಾ ಯಾತ್ರೆ ನಡೆಸಿ, 205 ಅಡಿ ಅಗಲ, 630 ಅಡಿ ಉದ್ದದ ತ್ರಿವರ್ಣ ಧ್ವಜ ಪ್ರದರ್ಶಿಸಿದೆ. ಮಲ್ಲೇಶ್ವರದ ಗುಂಡೂರಾವ್ ಆಟದ ಮೈದಾನದಿಂದ 18ನೇ ಕ್ರಾಸ್ ಆಟದ ಮೈದಾನದ ವರೆಗೆ 1.5 ಕಿ.ಮೀ ಬಿಜೆಪಿ ತಿರಂಗಾ ಯಾತ್ರೆ ನಡೆಸಲಾಯಿತು. ಈ ತಿರಂಗಾ ಯಾತ್ರೆಯಲ್ಲಿ ಸಾವಿರಾರು ಜನ ರಾಷ್ಟ್ರಧ್ವಜ ಹಿಡಿದು ಭಾಗವಹಿದ್ದರು. ಪ್ರಚಾರ ವಾಹನಕ್ಕೆ ಅಳವಡಿಸಿದ್ದ ಸೈನಿಕ ವೇಷಧಾರಿಯಾಗಿ ಕೈಯಲ್ಲಿ ಬಂದೂಕು ಹಿಡಿದು ನಿಂತಿರುವ ಮೋದಿ ಕಟೌಟ್ ಎಲ್ಲರ ಗಮನ ಸೆಳೆಯಿತು. ಬಿಜೆಪಿ ನಾಯಕರಾದ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ ದಾಸ್ ಅಗರವಾಲ್, ಅಶೋಕ್, ಅಶ್ವಥ್ ನಾರಾಯಣ್, ಸಿಟಿ ರವಿ, ಮುನಿರತ್ನ, ಬೈರತಿ ಬಸವರಾಜು, ಗೋಪಾಲಯ್ಯ, ಮುನಿಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು. ಬಿಜೆಪಿ ತಿರಂಗಾ ಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸಂತೋಷ್ ಲಾಡ್, ಅಮೆರಿಕ ಅಧ್ಯಕ್ಷರ ಮೂಲಕ ಕದನ ವಿರಾಮ ತಿಳಿದುಕೊಳ್ಳಬೇಕಾಯಿತು. ಟ್ರಂಪ್ ಹೇಳಿದ್ದಕ್ಕೆ ಯುದ್ಧ ನಿಲ್ಲಿಸಲಾಯಿತೇ? ಬಿಜೆಪಿಯವರು ತಿರಂಗಾ ಯಾತ್ರೆ ಮಾಡುತ್ತಿದ್ದಾರೆ. ಅವರು ತಿರಂಗಾ ಯಾತ್ರೆ ಬದಲು ಟ್ರಂಪ್ ಯಾತ್ರೆ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯನ್ನು ಇಂದಿನಿಂದ ಜಾರಿಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ವಹಿಸಿಕೊಳ್ಳುವವರೆಗೆ ಬಿಬಿಎಂಪಿ ಮುಂದುವರಿಯಲಿದೆ. ಜಿಬಿಎ ಅಡಿಯಲ್ಲಿ ವಿವಿಧ ನಿಗಮಗಳ ಪುನರ್ರಚನೆ ಪೂರ್ಣಗೊಳ್ಳುವವರೆಗೆ, ನಿಗಮದ ಕಾರ್ಯಚಟುವಟಿಕೆಯಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಮುಂದಿನ ಹಂತದಲ್ಲಿ, ಜಿಬಿಎ ಅಡಿಯಲ್ಲಿ ಬರುವ ಪ್ರದೇಶಗಳನ್ನು ಸೂಚಿಸಲಾಗುತ್ತದೆ. ಅದು ಮುಗಿದ ನಂತರ, ಈ ಪ್ರದೇಶಗಳನ್ನು ಜಿಬಿಜಿ ಕಾಯ್ದೆಯ ಸೆಕ್ಷನ್ 5 ರ ಪ್ರಕಾರ ನಿಗಮಗಳನ್ನು ರಚಿಸಲು ಮತ್ತಷ್ಟು ವಿಂಗಡಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹೇಳಿದ್ದಾರೆ. ನಗರ ಆಡಳಿತಕ್ಕೆ ಉಂಟಾಗಬಹುದಾದ ಗೊಂದಲದ ಕುರಿತ ಪ್ರಶ್ನೆಗೆ, ಉತ್ತರಿಸಿದ ಅವರು ಎಲ್ಲವನ್ನೂ ಅಂತಿಮಗೊಳಿಸುವವರೆಗೆ, ಬಿಬಿಎಂಪಿಯ ಪ್ರಸ್ತುತ ಸ್ಥಾನವು ಹಾಗೆಯೇ ಕಾರ್ಯನಿರ್ವಹಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸಿ ದುರ್ವರ್ತನೆ ತೋರಿದ ಆಟೋ ಚಾಲಕನಿಗೆ ಬುದ್ಧಿ ಹೇಳಿದ್ದಕ್ಕೆ, ಇಬ್ಬರು ವ್ಯಕ್ತಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆಯೊಂದು ನಗರದ ಚಂದ್ರ ಲೇಔಟ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ವ್ಯಕ್ತಿ ಮತ್ತು ಆತನ ಸ್ನೇಹಿತ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಆರೋಪಿಗಳು ಏಕಮುಖವಾಗಿ ಆಟೋ ಚಲಾಯಿಸಿಕೊಂಡು ಬಂದು ಪ್ರಿಯದರ್ಶಿನಿ ಲೇಔಟ್‌ನ ಜಸ್ಟ್ ಬೇಕ್ ಬಳಿ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ದ್ವಿಚಕ್ರವಾಹನ ಸವಾರರು ಸಂಚಾರ ನಿಯಮ ಪಾಲಿಸುವಂತೆ ಬುದ್ಧಿ ಹೇಳಿ, ಮುಂದೆ ಸಾಗಿದ್ದಾರೆ. ಬಳಿಕ ಆರೋಪಿಗಳು ವಾಹನವನ್ನು ಹಿಂಬಾಲಿಸಿಕೊಂಡು ಹೋಗಿ ಹತ್ಯೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್ ಸಂತ್ರಸ್ತರು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ವೈದ್ಯರು ಮತ್ತು ದಾದಿಯರಿಗೆ ಶೇ. 55 ರಷ್ಟು ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಸಚಿವ ಗುಂಡೂರಾವ್, ಈ ವೇತನ ಹೆಚ್ಚಳ ಹೊಸದಾಗಿ ನೇಮಕವಾಗುವ ಸಿಬ್ಬಂದಿಗೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. ಈಗಿರುವ ಸಿಬ್ಬಂದಿಗೆ ಇದೇ ವೇತನ ಮುಂದುವರೆಯಲಿದೆ. ಅವರು ಕೂಡ ಹೊಸ ವೇತನಕ್ಕೆ ಅರ್ಹರಾಗಬೇಕಾದರೆ, ಈಗಿರುವ ಸ್ಥಾನಕ್ಕೆ ರಾಜೀನಾಮೆ ನೀಡಿ, ಪುನಃ ಹೊಸದಾಗಿ ಅರ್ಜಿ ಸಲ್ಲಿಸಬೇಕು ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಿದಾಗ ಈಗಾಗಲೇ ಕೆಲಸ ಮಾಡಿದ ವೈದ್ಯರಿಗೆ ಹೊಸ ಹುದ್ದೆಗಳನ್ನು ನೀಡಲಾಗುತ್ತದೆ ಎಂಬ ಭರವಸೆಯನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಕನ್ನಡಿಗರನ್ನು ಪಹಲ್ಗಾಮ್ ದಾಳಿಗೆ ಹೋಲಿಕೆ ಮಾಡಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದ ಬಾಲಿವುಡ್ ಗಾಯಕ ಸೋನು ನಿಗಮ್ ವಿರುದ್ಧ ಮುಂದಿನ ವಿಚಾರಣೆಯ ದಿನಾಂಕದವರೆಗೆ ಯಾವುದೇ ರೀತಿಯ ಬಲವಂತದ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ. ಗಾಯಕ ಸೋನು ನಿಗಂ ತಮ್ಮ ಮೇಲಿನ ಎಫ್ಐಆರ್ ರದ್ದು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೋನು ನಿಗಮ್ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಅಗತ್ಯವಿದ್ದರೆ ತನಿಖಾ ಅಧಿಕಾರಿ (ಐಒ) ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ದಾಖಲಿಸಿಕೊಳ್ಳಲು ನ್ಯಾಯಾಲಯವು ಗಾಯಕನಿಗೆ ಅನುಮತಿ ನೀಡಿದೆ.