ತಮನ್ನಾ ಭಾಟಿಯಾ 
ರಾಜ್ಯ

Tamannaah Bhatia ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ; ಸಂಭಾವನೆ ಎಷ್ಟು ಗೊತ್ತಾ?

ಮೈಸೂರು ಸ್ಯಾಂಡಲ್ ಮತ್ತು ಇತರ ಉತ್ಪನ್ನಗಳಿಗೆ 2 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.

ಬೆಂಗಳೂರು: ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್ ನ ಅಧಿಕೃತ ರಾಯಭಾರಿಯನ್ನಾಗಿ 2 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.

ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ ನಿಂದ ಈ ಪ್ರಕಟಣೆ ಹೊರಬಿದ್ದಿದ್ದು, ಮೈಸೂರು ಸ್ಯಾಂಡಲ್ ಮತ್ತು ಇತರ ಉತ್ಪನ್ನಗಳಿಗೆ 2 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಎಂದು ವಿವರಿಸಲಾಗಿದೆ.

ಸಂಭಾವನೆ 6 ಕೋಟಿ!

ಇದಕ್ಕೆ ತಮನ್ನಾ ಭಾಟಿಯಾ ಅವರಿಗೆ 6.2 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದ್ದು, ಇಷ್ಟೊಂದು ದೊಡ್ಡ ಮೊತ್ತ ನೀಡಿ ನೇಮಕ ಮಾಡಿಕೊಳ್ಳುವ ಅಗತ್ಯವಿತ್ತೇ ಎಂಬ ಪ್ರಶ್ನೆ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಕನ್ನಡಿಗರು ಸಿಗಲಿಲ್ಲವಾ?

ತಮನ್ನಾ ಭಾಟಿಯಾ ದಕ್ಷಿಣ ಭಾರತ ಚಿತ್ರರಂಗ ಸೇರಿದಂತೆ ಬಾಲಿವುಡ್ ನಲ್ಲಿ ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಜೊತೆಗೆ ಗ್ಲಾಮರಸ್ ಕೂಡ ಆಗಿ ಕಾಣುತ್ತಾರೆ, ಇದನ್ನು ನೋಡಿ ಮಾರುಕಟ್ಟೆ ಲೆಕ್ಕಾಚಾರ ಹಾಕಿ ಕರ್ನಾಟಕ ಸರ್ಕಾರ ಅವರನ್ನು ಸಂಪರ್ಕಿಸಿ ನೇಮಕ ಮಾಡಿಕೊಂಡಿರಬಹುದು. ಆದರೆ ಕನ್ನಡದ ಕಲಾವಿದರು ಯಾರೂ ಸಿಗಲಿಲ್ಲವಾ ಎಂದು ಸಹ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ವಿಶ್ವಮಟ್ಟದ ಉತ್ಪನ್ನ ಮಾಡಲು ಕಾರ್ಯತಂತ್ರ: ಎಂ ಬಿ ಪಾಟೀಲ

ಕರ್ನಾಟಕದ ಹೆಮ್ಮೆಯ ಸಂಕೇತವಾಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್ಡಿಎಲ್) ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ನಟಿ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಇದರಲ್ಲಿ ಅವರ ವರ್ಚಸ್ಸು, ಡಿಜಿಟಲ್ ಪ್ರಸ್ತುತಿ ಮತ್ತು ಯುವಜನರೊಂದಿಗೆ ಅವರ ಸಂಪರ್ಕ ಇವುಗಳನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಗುರುವಾರ ಸ್ಪಷ್ಟಪಡಿಸಿದ್ದಾರೆ.

ತಮನ್ನಾ ಅವರನ್ನು 6.2 ಕೋಟಿ ರೂಪಾಯಿ ಸಂಭಾವನೆಯೊಂದಿಗೆ ಎರಡು ವರ್ಷಗಳ ಅವಧಿಗೆ ಕೆಎಸ್ಡಿಎಲ್ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಂಡಿರುವುದಕ್ಕೆ ಕೆಲವರು ಅಪಸ್ವರ ಎತ್ತಿರುವುದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.

ಕೆಎಸ್ಡಿಎಲ್ ಕಳೆದ ಸಾಲಿ‌ನಲ್ಲಿ 1,785 ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಇದರಲ್ಲಿ ಕರ್ನಾಟಕದ ಪಾಲು ಶೇ 18ರಷ್ಟಿದೆ. ಉಳಿದದ್ದು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದಿಂದ ಬಂದಿದೆ. ಸಂಸ್ಥೆಯ ವಹಿವಾಟನ್ನು 2030ರ ವೇಳೆಗೆ 5,000 ಕೋಟಿ ರೂಪಾಯಿಗೆ ಕೊಂಡೊಯ್ಯುವ ಗುರಿ ಇಟ್ಟುಕೊಂಡು ಈಗ ದಾಪುಗಾಲು ಹಾಕುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆ ತಂತ್ರವೇ ಮುಖ್ಯವಾಗುತ್ತದೆ. ಇದು ಮಾರುಕಟ್ಟೆ ಪರಿಣತರ ಸಮಿತಿಯ ತೀರ್ಮಾನವಾಗಿದೆ ಎಂದು ಅವರು ಹೇಳಿದ್ದಾರೆ.

ನಾವು ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಪೂಜಾ ಹೆಗಡೆ, ಕಿಯಾರಾ ಅಡ್ವಾಣಿ ಅವರನ್ನೂ ಪರಿಗಣಿಸಿ‌ ನೋಡಿದೆವು. ಆದರೆ ತಮನ್ನಾ ಅವರು ಡಿಜಿಟಲ್ ಲೋಕದಲ್ಲಿ 2.8 ಕೋಟಿ ಪಾಲೋಯರ್ಸ್ ಹೊಂದಿ, ಉಳಿದವರಿಗಿಂತ ಮುಂದಿದ್ದಾರೆ. ಜತೆಗೆ ಅವರು ಅಖಿಲ ಭಾರತ ಮಟ್ಟದ ವರ್ಚಸ್ಸು ಹೊಂದಿದ್ದಾರೆ.

ಹೀಗಾಗಿ ಅವರನ್ನೇ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಳ್ಳಲಾಗಿದೆ. ಇದು ಕೆಎಸ್ಡಿಎಲ್ ಸಂಸ್ಥೆಗೆ ನಾವು ತರುತ್ತಿರುವ ಸಮಗ್ರ ಪರಿವರ್ತನೆಯಲ್ಲಿ ಕೇವಲ ಒಂದು ಅಂಶವಷ್ಟೆ ಎಂದು ಅವರು ವಿವರಿಸಿದ್ದಾರೆ.

ಕೆಎಸ್ಡಿಎಲ್ ನ ಉದ್ಯೋಗಿಗಳು ಕನ್ನಡಿಗರೇ ಆಗಿದ್ದಾರೆ. ಬರುವ ಲಾಭಾಂಶದಲ್ಲಿ ಶೇಕಡ 30ರಷ್ಟನ್ನು ಸರಕಾರಕ್ಕೆ ಕೊಡಲಾಗುತ್ತಿದೆ. ಈಗ ಯೂರೋಪ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಲಾಗುತ್ತಿದೆ. ಇವುಗಳ ಭಾಗವಾಗಿ 435 ವಿತರಕರನ್ನು ಹೊಸದಾಗಿ ನೇಮಿಸಿಕೊಳ್ಳಲಾಗಿದೆ. ಜತೆಗೆ ಇ-ಕಾಮರ್ಸ್ ಮೂಲಕ 500 ಕೋಟಿ ರೂಪಾಯಿ ವಹಿವಾಟು ನಡೆಸುವ ಮತ್ತು ರಫ್ತಿನಿಂದ 150 ಕೋಟಿ ರೂಪಾಯಿ ಗಳಿಸುವ ಗುರಿ ಹೊಂದಿದ್ದೇವೆ ಎಂದು ಪಾಟೀಲ ಪ್ರತಿಪಾದಿಸಿದ್ದಾರೆ.

ಇಷ್ಟಕ್ಕೂ ಒಂದು ಸರ್ಕಾರಿ ಸಂಸ್ಥೆ ಹೊಸ ಘಟಕವನ್ನು ವಿಜಯಪುರದಲ್ಲಿ ಆರಂಭಿಸುವ ಹಂತಕ್ಕೆ ಹೋಗುತ್ತಿದೆ ಎನ್ನುವುದೇ ಹೆಮ್ಮೆಯ ವಿಷಯ. ಹೀಗೆ ಮಾಡಿದ ನಂತರ ಅದನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು‌ ಹೋಗಬೇಕಾಗಿದೆ. ಹಾಗೆಯೇ ಬ್ರ್ಯಾಂಡಿಂಗ್ ಹೆಚ್ಚಿಸಲು ಪ್ಯಾಕಿಂಗ್ ಬದಲಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸುಂಕ ಅನಿಶ್ಚಿತತೆ ಮಧ್ಯೆ ವಿತ್ತೀಯ ನೀತಿ ಪ್ರಕಟ: ರೆಪೊ ದರ ಯಥಾಸ್ಥಿತಿ ಕಾಯ್ದುಕೊಂಡ RBI

Madhya Pradesh: 15 ದಿನದಲ್ಲಿ 6 ಮಕ್ಕಳ ಕಿಡ್ನಿ ಫೇಲ್, ಸಾವು..! 2 Cough Syrup ನಿಷೇಧ! ICMR ತಂಡ ದೌಡು

Asia Cup 2025 ಸೋಲಿನ ಬೆನ್ನಲ್ಲೇ ಬರೆ, ಬಾಲ ಬಿಚ್ಚಿದ್ದ ಆಟಗಾರರ ಪುಡಿಗಾಸಿಗೂ PCB ಕೊಕ್ಕೆ!, NOC 'Suspension'

ಮಧ್ಯ ಫಿಲಿಪೈನ್ಸ್ ಪ್ರದೇಶದಲ್ಲಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 69ಕ್ಕೆ ಏರಿಕೆ

ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದಿದ್ದರೆ ಅಮೆರಿಕಕ್ಕೆ 'ದೊಡ್ಡ ಅವಮಾನ': Donald Trump

SCROLL FOR NEXT