ಕರ್ನಾಟಕ ಪ್ರವಾಸ ಕೈಗೊಂಡಿರುವ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್, ಕರ್ನಾಟಕದ ವಿದ್ಯುತ್ ಕ್ಷೇತ್ರದ ಸಮಗ್ರ ಪರಿಶೀಲನೆ ನಡೆಸಿ, ರಾಜ್ಯ ಸರ್ಕಾರ ತನ್ನ ವಿದ್ಯುತ್ ಸೌಲಭ್ಯಗಳ ವಾರ್ಷಿಕ ಆರ್ಥಿಕ ನಷ್ಟವನ್ನು ಕಡಿಮೆ ಮಾಡಲು ಮತ್ತು ವೆಚ್ಚ-ಪ್ರತಿಫಲಿತ ಸುಂಕಗಳನ್ನು ಜಾರಿಗೆ ತರಲು ಒತ್ತಾಯಿಸಿದರು. ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಬಾಕಿ ಮತ್ತು ಸಬ್ಸಿಡಿಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು ಮತ್ತು ಆಗಸ್ಟ್ 2025 ರ ವೇಳೆಗೆ ಸ್ಥಳೀಯ ಸಂಸ್ಥೆಗಳು ಮತ್ತು ವಸಾಹತುಗಳು ಸೇರಿದಂತೆ ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲಿ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್‌ಗಳ ಸ್ಯಾಚುರೇಶನ್ ಅನ್ನು ಖಚಿತಪಡಿಸಿಕೊಳ್ಳಲು ರಾಜ್ಯಕ್ಕೆ ಸಲಹೆ ನೀಡಿದರು. ರಾಜ್ಯದ ವಿದ್ಯುತ್ ಮಿಶ್ರಣದಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು ಹೆಚ್ಚಿಸಿದ್ದಕ್ಕಾಗಿ ಖಟ್ಟರ್ ರಾಜ್ಯ ಸರ್ಕಾರವನ್ನು ಅಭಿನಂದಿಸಿದ್ದಾರೆ. ಇದೇ ವೇಳೆ ಮೆಟ್ರೋ ಬಗ್ಗೆಯೂ ಮಾತನಾಡಿರುವ ಖಟ್ಟರ್, ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದ ನಂತರ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಬೆಂಗಳೂರು ಮೆಟ್ರೋ ಹಂತ-2 ಮತ್ತು 3A ಪ್ರಸ್ತಾವನೆಗಳನ್ನು ಪರಿಶೀಲಿಸಲಿದೆ ಎಂದು ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಈಗ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಹೆಸರು ಕೇಳಿಬಂದಿದೆ. ಯಂಗ್ ಇಂಡಿಯಾಗೆ ಡಿಕೆ ಶಿವಕುಮಾರ್, ಡಿಕೆ ಸುರೇಶ್ 2.5 ಕೋಟಿ ರೂ. ದೇಣಿಗೆ ನೀಡಿರುವುದರ ಬಗ್ಗೆ ಜಾರಿ ನಿರ್ದೇಶನಾಲಯ ಹೆಚ್ಚುವರಿ ಚಾರ್ಜ್‌ಶೀಟ್ ನಲ್ಲಿ ಉಲ್ಲೇಖಿಸಿದೆ. ಹೈಕಮಾಂಡ್ ಸೂಚನೆ ಮೇರೆಗೆ ದೇಣಿಗೆ ನೀಡಲಾಗಿದೆ ಎಂದು ಇಡಿ ಆರೋಪಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ನ್ಯಾಷನಲ್ ಹೆರಾಲ್ಡ್ ಗೆ ನಾವು ರಾಜಾರೋಷವಾಗಿ 25 ಲಕ್ಷ ರೂ ಕೊಟ್ಟಿದ್ದೇವೆ, ನಮ್ಮ ಟ್ರಸ್ಟ್ ನಿಂದಲೂ ದೇಣಿಗೆ ನೀಡಿದ್ದೇವೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ 142 ಕೋಟಿ ರೂ. ಹಣ ದುರ್ಬಳಕೆ ಮಾಡಿದ್ದಾರೆ ಎಂದು ED ಆರೋಪಿಸಿತ್ತು.
ನಟಿ ತಮನ್ನಾ ಭಾಟಿಯಾ ಅವರಿಗೆ 6.2 ಕೋಟಿ ರೂಪಾಯಿ ಸಂಭಾವನೆ ನಿಗದಿ ಮಾಡಿ ಸರ್ಕಾರಿ ಸ್ವಾಮ್ಯದ ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ತನ್ನ ಬ್ರಾಂಡ್ ಅಂಬಾಸೆಡರ್ ಆಗಿ ನೇಮಕ ಮಾಡಲಾಗಿದೆ. ಮೈಸೂರು ಸ್ಯಾಂಡಲ್ ಸೋಪ್ ಗೆ ನಟಿ ತಮನ್ನಾ ಭಾಟಿಯಾ ರಾಯಭಾರಿ ನಿರ್ಧಾರಕ್ಕೆ ಕನ್ನಡ ಪರ ಸಂಘಟನೆಗಳು, ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗತೊಡಗಿದೆ. ಇದು ಅವಿವೇಕದ, ಅಸಂಬದ್ಧ, ಬೇಜವಾಬ್ದಾರಿಯುತ ತೀರ್ಮಾನವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಕಿಡಿಕಾರಿದ್ದಾರೆ. ಮೈಸೂರು ಸ್ಯಾಂಡಲ್ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಬ್ರಾಂಡ್‌ಗಳಲ್ಲಿ ಒಂದಾಗಿದೆ ಮತ್ತು ಇದರ ಪ್ರಾಥಮಿಕ ಗ್ರಾಹಕರು ಕನ್ನಡಿಗರಾಗಿದ್ದಾರೆ ಎನ್ನುವ ಕನಿಷ್ಠ ತಿಳಿವಳಿಕೆ ಈ ನೇಮಕ ಮಾಡುವಾಗ ಇರಲಿಲ್ಲವೇ? ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವುಳ್ಳ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರೇ ಬೇಕಿತ್ತೆ? ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ನ ಹೊಸ ರೂಪಾಂತರಿ ಸೋಂಕು ಮತ್ತೆ ವ್ಯಾಪಿಸುತ್ತಿದ್ದು, ಬೆಂಗಳೂರಿನಲ್ಲಿ ಒಂಬತ್ತು ತಿಂಗಳ ಮಗುವಿಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ್ ಗುಪ್ತಾ, ಸೋಂಕು ಪೀಡಿತ ಮಗುವಿಗೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಒಟ್ಟು 257 ರಾಜ್ಯದಲ್ಲಿ 16 ಸಕ್ರಿಯ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಕೊರೊನಾ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಹಾವೇರಿಯ ಹಾನಗಲ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ 7 ಆರೋಪಿಗಳು ಮೇ 20 ರಂದು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ರೋಡ್ ಶೋ ನಡೆಸಿರುವ ವಿಡಿಯೋ ವೈರಲ್ ಆಗತೊಡಗಿದೆ. 17 ತಿಂಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಿಗೆ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಸಬ್ ಜೈಲಿನಿಂದ ಸುಮಾರು 3೦ ಕಿ.ಮೀ ದೂರದಲ್ಲಿರುವ ಅವರ ಊರು ಅಕ್ಕಿಹಾಳೂರಿಗೆ ಮೆರವಣಿಗೆ ಏರ್ಪಡಿಸಿದರು. ಈ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ನ್ಯಾಯಾಲಯವು ಜಾಮೀನು ರದ್ದುಗೊಳಿಸಲು ಆದೇಶಿಸಿ ಅವರನ್ನು ಮತ್ತೆ ಜೈಲಿಗೆ ಕಳುಹಿಸಿತು.