ಹಾವೇರಿ: ಕಳೆದ 6-7 ತಿಂಗಳಿನಿಂದ ಶಿಗ್ಗಾವಿ ತಾಲೂಕಿನಲ್ಲಿ ಜೂಜಾಟ, ಒಸಿ ಹಾಗೂ ಡ್ರಗ್ಸ್ ಸೇವನೆ ಹೆಚ್ಚಾಗಿರುವ ಸುದ್ದಿ ಬರುತ್ತಿವೆ. ಒಂದು ಸುಸಂಸ್ಕೃತ ಕ್ಷೇತ್ರವನ್ನು ಜೂಜುಗಾರರ ಕ್ಷೇತ್ರವಾಗಿ ಪರಿವರ್ತನೆ ಆಗುತ್ತಿರುವುದು ನನಗೆ ದುಖ ತಂದಿದೆ. ಎಲ್ಲ ಚಟುವಟಿಕೆಗಳಿಗೆ ಪೊಲೀಸರು ಸಾಥ್ ಕೊಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಡಿಜಿಪಿ ಹಾಗೂ ಹಾವೇರಿ ಎಸ್ಪಿ ಅವರಿಗೆ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಲವಾರು ಬಾರಿ ಜೂಜಾಟದಲ್ಲಿ ಕೆಲವರು ಸಿಕ್ಕರೂ ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದೂವರೆಗೆ ಎರಡು ಪ್ರಕರಣಗಳು ಜೂಜುಕೋರರ ಮೇಲೆ ದಾಖಲಾಗಿದ್ದು ಯಾರೋಬ್ಬರನ್ನು ಬಂಧಿಸದೇ ನಕಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇತ್ತೀಚಿಗೆ ಶಿಗ್ಗಾವಿ ಡಿವೈಎಸ್‌ಪಿ 4 ಜನ ಗಾಂಜಾ ಮಾರುವವರನ್ನು ಕರೆತಂದು ಪ್ರಕರಣ ದಾಖಲಿಸದೆ ಸುಮ್ಮನೆ ಬಿಟ್ಟು ಕಳುಹಿಸಿದ್ದಾರೆ ಎಂಬ ಮಾಹಿತಿ ಇದೆ.
ಅಲ್ಲದೆ, ಸ್ಥಳೀಯ ಶಾಸಕರ ಆಪ್ತರು ಮತ್ತು ಆಶ್ರಯ ಸಮಿತಿ ಸದಸ್ಯರು ಈ ಜೂಜಾಟ ಆಡಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಮಾಧ್ಯಮದಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಯಾರ ಮೇಲೆ ಎಫ್‌ಐಆರ್ ಆಗಿದೆಯೋ ಅವರನ್ನು ತಕ್ಷಣವೇ ಬಂಧಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯ ಸಿಸಿಬಿ ಪೊಲಿಸರು ಬಿಸ್ನಳ್ಳಿ ಬಳಿ 50ಕೆಜಿ ಗಾಂಜಾ ಸಿಕ್ಕಿದ್ದನ್ನು ಕೇವಲ 10ಕೆಜಿ ಎಂದು ತೋರಿಸಿದ್ದಾರೆ ಎಂದು ಕೇಸ್‌ಗಳ ಮುಖಾಂತರ ಗೊತ್ತಾಗುತ್ತಿದೆ. ಕೂಡಲೇ ತಾಲೂಕಿನಲ್ಲಿ ಒಸಿ, ಜೂಜಾಟ, ಗಾಂಜಾ ಸೇವನೆ ನಿಲ್ಲಿಸಬೇಕು ಅವರು ಎಷ್ಟೇ ದೊಡ್ಡವರಿದ್ದರೂ ರಾಜಕೀಯ ಒತ್ತಡಕ್ಕೆ ಮಣಿಯದೆ ಎಲ್ಲರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಕೊಗಳ್ಳಬೇಕು. ಅಲ್ಲದೇ ಈ ಅಕ್ರಮದಲ್ಲಿ ಯಾರು ಭಾಗಿಯಾಗಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.