ಬೆಂಗಳೂರು: ಕರ್ನಾಟಕದಾದ್ಯಂತ ಪ್ರಮುಖ ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆಗಾಗಿ ರಿಯಲ್- ಟೈಮ್, ಸಂಯೋಜಿತ ಒಳನೋಟಗಳನ್ನು ಒದಗಿಸುವ ವೇದಿಕೆಯಾದ 'ಮುಖ್ಯಮಂತ್ರಿಗಳ ಡ್ಯಾಶ್‌ಬೋರ್ಡ್'(ಸಿಎಂ ಡ್ಯಾಶ್‌ಬೋರ್ಡ್) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬಿಡುಗಡೆ ಮಾಡಿದರು.
ಇಂದು ವಿಧಾನಸೌಧದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಎಲ್ಲಾ ಜಿಲ್ಲಾ ಪಂಚಾಯತ್‌ಗಳ ಸಿಇಒಗಳೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು 'ಸಿಎಂ ಡ್ಯಾಶ್‌ಬೋರ್ಡ್'ಗೆ ಚಾಲನೆ ನೀಡಿದರು.
ಇ-ಆಡಳಿತ ಕೇಂದ್ರ(ಸಿಇಜಿ) ಆಂತರಿಕವಾಗಿ ಅಭಿವೃದ್ಧಿಪಡಿಸಿದ ಈ ಡ್ಯಾಶ್‌ಬೋರ್ಡ್ ಈಗ ಕ್ರಿಯಾತ್ಮಕವಾಗಿ ಪೂರ್ಣಗೊಂಡಿದೆ ಮತ್ತು cmdashboard.karnataka.gov.in ಡೊಮೇನ್ ಅಡಿಯಲ್ಲಿ ಹೋಸ್ಟ್ ಮಾಡಲಾಗಿದೆ.
ಈ ಡ್ಯಾಶ್‌ಬೋರ್ಡ್ ಕರ್ನಾಟಕದಾದ್ಯಂತ ಪ್ರಮುಖ ಅಭಿವೃದ್ಧಿ ಕಾರ್ಯಗಳ ನೈಜ ಸ್ಥಿತಿ, ಸಂಯೋಜಿತ ಒಳನೋಟಗಳನ್ನು ಒದಗಿಸುತ್ತದೆ. ಇದು ಉನ್ನತ ಮಟ್ಟದಲ್ಲಿ ಡೇಟಾ-ಚಾಲಿತ ಆಡಳಿತ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಪಾರದರ್ಶಕತೆಯನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಈ ಪೋರ್ಟಲ್ ರಿಯಲ್-ಟೈಮ್ ಪ್ರಗತಿ ಮಾಪನಗಳನ್ನು ಪ್ರದರ್ಶಿಸುತ್ತದೆ ಮತ್ತು ಪ್ರಮುಖ ಯೋಜನೆಗಳು ಹಾಗೂ ಸೇವಾ ಫಲಿತಾಂಶಗಳಿಗೆ ಸಾರ್ವಜನಿಕ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ AC ಮತ್ತು DC ಕೋರ್ಟ್‌ನಲ್ಲಿ ಸಾಕಷ್ಟು ಪ್ರಕರಣಗಳು ಬಾಕಿ ಇರುವುದಕ್ಕೆ ಗರಂ ಆಗಿದ್ದು, ಜಿಲ್ಲೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ಅಂತಹ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ಸಸ್ಪೆಂಡ್ ಮಾಡಿ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಸಿಎಂ ಸೂಚನೆ ನೀಡಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ AC, DC, ತಹಶೀಲ್ದಾರ್ ಕೋರ್ಟ್ ಗಳಲ್ಲಿ ಬಾಕಿ ಕೇಸುಗಳು ಶೀರ್ಘ ವಿಲೇವಾರಿ ಆಗುತ್ತಿರುವುದಕ್ಕೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿಗಳು ಬೆಂಗಳೂರು ಗ್ರಾಮಾಂತರ ಮತ್ತು ಎರಡು ಜಿಲ್ಲೆಗಳಲ್ಲಿ ಮಾತ್ರ AC ಮತ್ತು DC ಕೋರ್ಟ್ ಗಳಲ್ಲಿ ಐದು ವರ್ಷಕ್ಕೂ ಹಳೆಯದಾದ ಪ್ರಕರಣಗಳು ಬಾಕಿ ಇರುವುದಕ್ಕೆ ಅಸಮಾಧಾನಗೊಂಡರು.