ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ 
ರಾಜ್ಯ

ನಾಡಿನಾದ್ಯಂತ 70ನೇ ಕನ್ನಡ ರಾಜ್ಯೋತ್ಸವ ಆಚರಣೆ: ಜನತೆಗೆ CM-DCM ಸೇರಿ ಗಣ್ಯರಿಂದ ಶುಭಾಶಯ

ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ಭಾಷೆಯನ್ನು ನಿತ್ಯ ಬಳಸಿ, ಅದನ್ನು ಇನ್ನಷ್ಟು ಉತ್ತುಂಗಕ್ಕೇರಿಸುವ ಕಾರ್ಯ ನಮ್ಮೆಲ್ಲರ ಪರಮ ಕರ್ತವ್ಯ. ಎಲ್ಲರ ನುಡಿಯಾಗಲಿ ಕನ್ನಡ, ಎಲ್ಲರ ನಡೆಯಾಗಲಿ ಕನ್ನಡ.

ಬೆಂಗಳೂರು: ರಾಜ್ಯದಾದ್ಯಂತ 70ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಸೇರಿದಂತೆ ಗಣ್ಯಾತಿ ಗಣ್ಯರು ನಾಡಿನ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನ್ನಡದ ಭಾಷೆಗೆ ತನ್ನದೇ ಆದ ಅಸ್ಮಿತೆಯಿದೆ. ಅದು ಬಹುತ್ವವನ್ನು ಗೌರವಿಸುವ ಮತ್ತು ಒಕ್ಕೂಟದ ಹಿತವನ್ನು ಕಾಯುವ ಬಾಳನೋಟದ ಅಸ್ಮಿತೆ. ಇದು ಪಂಪನಿಂದ ಕುವೆಂಪು ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದುಬಂದಿರುವ ಜೀವನದರ್ಶನ. ಇದನ್ನೇ ಪಂಪ "ಮಾನವ ಕುಲ ತಾನೊಂದೇ ವಲಂ" ಎಂದು ಹೇಳಿದ್ದು ಎಂದು ಹೇಳಿದ್ದಾರೆ.

ಕನ್ನಡ ಭಾಷೆ ಎನ್ನುವುದು ಕೇವಲ ವರ್ಣಮಾಲೆ ಅಲ್ಲ. ಅದು ಕೇವಲ ಶಬ್ದ-ವಾಕ್ಯಗಳಲ್ಲ. ಭಾಷೆಯಲ್ಲಿ ಅದನ್ನಾಡುವ ಮನುಷ್ಯನ ಆಳವಾದ ಭಾವನೆಗಳಿರುತ್ತವೆ, ಪರಸ್ಪರ ಸಂಬಂಧಗಳಿರುತ್ತವೆ, ತನ್ನತನದ ಪ್ರಜ್ಞೆ ಇರುತ್ತದೆ. ಅದು ನಮ್ಮ ಸಂಸ್ಕೃತಿ, ಇತಿಹಾಸ, ನೆಲ-ಜಲದ ಸಂಪತ್ತು ಸೇರಿದಂತೆ ಎಲ್ಲವನ್ನೂ ಒಳಗೊಂಡ ಅಸ್ಮಿತೆ. ಕನ್ನಡ ಭಾಷೆ ಈ ಅಸ್ಮಿತೆಯ ಜೀವಧಾತು.

ಕೇವಲ ಅಭಿಮಾನದಿಂದ ಭಾಷೆಯ ರಕ್ಷಣೆ ಸಾಧ್ಯ ಇಲ್ಲ. ಪ್ರತಿಯೊಬ್ಬ ಕನ್ನಡಿಗನೂ ರಾಜ್ಯದಲ್ಲಿ ಕನ್ನಡದಲ್ಲೇ ಮಾತನಾಡುವ, ವ್ಯವಹರಿಸುವ ಪ್ರತಿಜ್ಞೆಗೈಯ್ಯೋಣ. ಕನ್ನಡವನ್ನು ಬಳಸೋಣ, ಬೆಳೆಸೋಣ ಎಂದು ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಪೋಸ್ಟ್ ಮಾಡಿ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹೃತ್ಪೂರ್ವಕ ಶುಭಾಶಯಗಳು ಎಂದು ಹೇಳಿದ್ದಾರೆ.

ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ಭಾಷೆಯನ್ನು ನಿತ್ಯ ಬಳಸಿ, ಅದನ್ನು ಇನ್ನಷ್ಟು ಉತ್ತುಂಗಕ್ಕೇರಿಸುವ ಕಾರ್ಯ ನಮ್ಮೆಲ್ಲರ ಪರಮ ಕರ್ತವ್ಯ. ಎಲ್ಲರ ನುಡಿಯಾಗಲಿ ಕನ್ನಡ, ಎಲ್ಲರ ನಡೆಯಾಗಲಿ ಕನ್ನಡ ಎಂದು ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪೋಸ್ಟ್ ಮಾಡಿ, ಕನ್ನಡ ಎಂದರೆ ಅಮೃತ ಕರುನಾಡ ಮಣ್ಣೇ ಶ್ರೀಗಂಧ". ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ನೆಲ, ಜಲ, ನಾಡು, ನುಡಿ, ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡೋಣ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಹೇಳಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪೋಸ್ಟ್ ಮಾಡಿ, ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಸಾಲನ್ನು ಹಾಕಿ, ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಎಲ್ಲ ಮಹನೀಯರನ್ನು ಸ್ಮರಿಸುತ್ತ, ನನ್ನೆಲ್ಲ ಪ್ರೀತಿಯ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಸವಿಗನ್ನಡದ ಕಂಪು ನಿತ್ಯ ಪಸರಿಸಲಿ. ಪ್ರತಿ ಮನೆ-ಮನವೂ ಕನ್ನಡವಾಗಲಿ. ಜೈ ತಾಯಿ ಭುವನೇಶ್ವರಿ. ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ ಎಂದು ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮಾಡಿ, ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ನಾಡಿನ ವೈಭವ, ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಅನನ್ಯ. ಈ ಹೆಮ್ಮೆಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಸಂಕಲ್ಪ ಮಾಡೋಣ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿವಿಧ ಕ್ಷೇತ್ರಗಳ ಸಾಧಕರಿಗೆ 'ರಾಜ್ಯೋತ್ಸವ ಪ್ರಶಸ್ತಿ' ಪ್ರದಾನ; ಕನ್ನಡ ಪರ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್!

ಬೆಳಗಾವಿ: ರಾಜ್ಯೋತ್ಸವ ಮೆರವಣಿಗೆ ವೇಳೆ ಐವರಿಗೆ ಚಾಕು ಇರಿತ; ಇಬ್ಬರ ಸ್ಥಿತಿ ಗಂಭೀರ!

ಸಿಎಂಎಸ್-03 ಉಪಗ್ರಹ: ಭಾರತೀಯ ನೌಕಾಪಡೆಗೆ ಹೊಸ ಕಣ್ಣು-ಕಿವಿ

Nehru-Patel Correspondence: ಭಾರತ ದೊಂದಿಗೆ ಕಾಶ್ಮೀರ ವಿಲೀನ; ನೆಹರು-ಪಟೇಲ್ ಪತ್ರ ವ್ಯವಹಾರ ಓದಿ; ಮೋದಿಗೆ ಖರ್ಗೆ ತಿರುಗೇಟು!

RSS ನಿಷೇಧಿಸಬೇಕು: ಖರ್ಗೆ ಹೇಳಿಕೆಗೆ ದತ್ತಾತ್ರೇಯ ಹೊಸಬಾಳೆ ಹೇಳಿದ್ದೇನು?

SCROLL FOR NEXT