70ನೇ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡಿದರು. ಬಳಿಕ ವಿವಿಧ ಕನ್ನಡ ನಾಡಿನ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಾತೃಭಾಷೆಯಲ್ಲೇ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಸೂಕ್ತ ಕಾನೂನುಗಳನ್ನು ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಕನ್ನಡ ಭಾಷೆ, ಪರಂಪರೆಗಳನ್ನು ಜಾಗತಿಕ ಮಟ್ಟಕ್ಕೆ ಎತ್ತರಿಸಲು ಹೊಸ ನೀತಿಯನ್ನು ತರುವ ಘೋಷಣೆಯನ್ನು ಮಾಡಿದ್ದಾರೆ. ಕೇಂದ್ರ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ರಾಜ್ಯಕ್ಕೆ ಮಲತಾಯಿ ಧೋರಣೆಯನ್ನು ತೋರುತ್ತಿದೆ. 4.5 ಲಕ್ಷ ಕೋಟಿ ರೂಪಾಯಿಗಳಿಂತ ಹೆಚ್ಚಿನ ತೆರಿಗೆ ಸಂಪತ್ತನ್ನು ಕರ್ನಾಟಕವು ನೀಡುತ್ತಿದೆ. ಆದರೆ ಹಿಂದಿ, ಸಂಸ್ಕೃತ ಭಾಷೆಗಳ ಅಭಿವೃದ್ಧಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ. ಕನ್ನಡವೂ ಸೇರಿದಂತೆ ಉಳಿದ ದೇಶ ಭಾಷೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದರು.
ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಸಡಗರ ಸಂಭ್ರಮ ಮನೆ ಮಾಡಿದ್ದರೆ ಬೆಳಗಾವಿಯಲ್ಲಿ ಮಾತ್ರ ನಾಡದ್ರೋಹಿ MES ಪುಂಡರು ನಿಷೇಧದ ನಡುವೆಯೂ ಕರಾಳದಿನ ಆಚರಿಸಿದರು. ಕರಾಳದಿನ ಆಚರಿಸಲು ಎಂಇಎಸ್ ಗೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಹೀಗಿದ್ದರೂ ಬೆಳಗಾವಿಯ ಸಂಭಾಜಿ ವೃತ್ತದಲ್ಲಿ ಎಂಇಎಸ್ ಪುಂಡರು ಕರಾಳದಿನ ಆಚರಣೆ ಮಾಡಿದ್ದಲ್ಲದೇ ಮೆರವಣಿಗೆ ನಡೆಸಿದ್ದಾರೆ. ಈ ಮೆರವಣಿಗೆಗೆ ಬೆಳಗಾವಿ ಪೊಲೀಸರು ಭದ್ರತೆ ಒದಗಿಸಿದಲ್ಲದೆ ಎಂಇಎಸ್ ಮುಖಂಡ ಶುಭಂ ಸೇಳಕೆ ಜೊತೆಗೆ ನಿಂತು ಬೆಳಗಾವಿಯ ಮಾಳಮಾರುತಿ ಠಾಣೆ ಸಿಪಿಐ ಜೆ.ಎಂ ಕಾಲೆಮಿರ್ಚೆ ಸೆಲ್ಫಿ ತೆಗೆದುಕೊಂಡಿದ್ದು ಈಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ನಿಷೇಧದ ನಡುವೆಯೂ ಮೆರವಣಿಗೆ ನಡೆಸಿದ್ದರಿಂದ ಶುಭಂ ಸೇಳಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿರುವ ದೇವಿಗೆರೆ ಕ್ರಾಸ್ ಬಳಿ ನಡೆದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಹದಿಹರೆಯದ 35 ಯುವತಿಯರು ಸೇರಿದಂತೆ 130 ಜನರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಗ್ಗಲೀಪುರ ಠಾಣೆಗೆ ಸಿಕ್ಕ ನಿರ್ದಿಷ್ಠ ಮಾಹಿತಿ ಆಧರಿಸಿ ಇಂದು ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ ಬೆಂಗಳೂರು ದಕ್ಷಿಣ ಎಸ್ಪಿ ಆರ್ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಪಾರ್ಟಿ ಆಯೋಜಕರನ್ನು ವಶಕ್ಕೆ ಪಡೆದು ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಬಂಧಿತ ಎಲ್ಲ ಯುವಕ-ಯುವತಿಯರು ಮಾದಕ ವಸ್ತುಗಳ ಸೇವನೆ ಪರಿಶೀಲಿಸಲು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಈ ಹೋಂಸ್ಟೇ ಸುಹಾಸ್ ಗೌಡ ಎಂಬ ವ್ಯಕ್ತಿಗೆ ಸೇರಿದೆ ಎಂದು ತಿಳಿದುಬಂದಿದೆ. ಈ ಪಾರ್ಟಿಯನ್ನು ವಾಟ್ಸಾಪ್ ಗ್ರೂಪ್ ಸಂದೇಶದ ಮೂಲಕ ಆಯೋಜಿಸಲಾಗಿತ್ತು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕನೇರಿ ಮಠದ ಪೀಠಾಧಿಪತಿ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ವಿರುದ್ಧ 1 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ರಾಜ್ಯಾದ್ಯಂತ ಬಸವ ಅಭಿಯಾನದ ನೇತೃತ್ವ ವಹಿಸಿದ್ದ 300ಕ್ಕೂ ಹೆಚ್ಚು ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು, ಅಶ್ಲೀಲ ಮತ್ತು ಮಾನಹಾನಿಕರ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕನೇರಿ ಮಠಾಧಿಪತಿಗಳ ವಿರುದ್ಧ 1 ಕೋಟಿ ರೂ.ಗಳ ಮಾನಹಾನಿ ಮೊಕದ್ದಮೆ ಹೂಡಿದೆ. ಏತನ್ಮಧ್ಯೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಗ್ಗೆ ಯಾವುದೇ ರೀತಿಯ ಅವಹೇಳನಕಾರಿ ಹೇಳಿಕೆ ನೀಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಕನೇರಿ ಮಠದ ಶ್ರೀಗಳಿಗೆ ನಿರ್ಬಂಧ ಹೇರಿದೆ.
ಮಂಗಳೂರಿನ ಕುಖ್ಯಾತ ರೌಡಿ ಟೊಪ್ಪಿ ನೌಫಾಲ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ವಾಗಿ ಹತ್ಯೆ ಮಾಡಲಾಗಿದೆ. ಕೇರಳದ ಉಪ್ಪಳ ಎಂಬಲ್ಲಿ ದುಷ್ಕರ್ಮಿಗಳು ಟೊಪ್ಪಿ ನೌಫಾಲ್ ನನ್ನು ಕೊಲೆ ಮಾಡಿದ್ದಾರೆ. ನೌಫಾಲ್ 2017ರಲ್ಲಿ ಮಂಗಳೂರಿನ ಫರಂಗಿಪೇಟೆಯಲ್ಲಿ ಅಡ್ಯಾರ್ ನ ರೌಡಿ ಜಿಯಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದನು. ಈತನ ವಿರುದ್ಧ ಮಂಗಳೂರಿನಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.