ಬೆಂಗಳೂರು: ನವೆಂಬರ್ 6 ಮತ್ತು 11 ರಂದು ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಹಾರದ ಕಾರ್ಮಿಕರು ತಮ್ಮ ಊರಿಗೆ ಪ್ರಯಾಣಿಸಲು ಮತ್ತು ಮತ ಚಲಾಯಿಸಲು ಸಾಧ್ಯವಾಗುವಂತೆ ರಾಜ್ಯದಲ್ಲಿರುವ ಎಲ್ಲ ಕಂಪನಿಗಳು ಮತ್ತು ವ್ಯಾಪಾರ ಸಂಸ್ಥೆಗಳು ವೇತನ ಸಹಿತ ರಜೆ ನೀಡಬೇಕೆಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಡಿಕೆ ಶಿವಕುಮಾರ್, 'ಬಿಹಾರ ರಾಜ್ಯದ ಸಾರ್ವತ್ರಿಕ ಚುನಾವಣೆ-2025 ನವೆಂಬರ್ 06 ಮತ್ತು 11 ರಂದು ನಡೆಯಲಿದೆ. ಬಿಹಾರದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ, ಎಲ್ಲ ಕಂಪನಿಗಳು, ವಾಣಿಜ್ಯ ಉದ್ಯಮಿಗಳು, ಹೋಟೆಲ್‌ಗಳು, ಗುತ್ತಿಗೆದಾರರು, ಬಿಲ್ಡರ್‌ಗಳು, ಅಂಗಡಿ ಮುಂಗಟ್ಟುಗಳು ಮತ್ತು ಇತರ ಉದ್ದಿಮೆದಾರರು ಬಿಹಾರದ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವಂತೆ ಬಿಹಾರ ರಾಜ್ಯದ ಮತದಾರರಿಗೆ ಕನಿಷ್ಠ ಮೂರು ದಿನಗಳ 'ವೇತನ ಸಹಿತ ರಜೆ' ನೀಡಲು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲು ನೆರವಾಗುವಂತೆ ನಾನು ವಿನಂತಿಸುತ್ತೇನೆ' ಎಂದಿದ್ದಾರೆ.
ಇದಕ್ಕೂ ಮೊದಲು, ನವೆಂಬರ್ 2 ರಂದು ಶಿವಕುಮಾರ್ ಬೆಂಗಳೂರಿನಲ್ಲಿ ವಾಸಿಸುವ ಬಿಹಾರ ಸಮುದಾಯದ ಸದಸ್ಯರಿಗೆ ಮನೆಗೆ ಪ್ರಯಾಣ ಬೆಳೆಸಿ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನದ ಮೈತ್ರಿಕೂಟವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಬೆಂಗಳೂರಿನ ಉತ್ತರದಲ್ಲಿರುವ ಕಾಫಿ ಬೋರ್ಡ್ ಲೇಔಟ್‌ನಲ್ಲಿ ಬಿಹಾರ ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಬಿಹಾರಕ್ಕೆ ಪ್ರಯಾಣಿಸುವವರಿಗೆ ಮತ ಚಲಾಯಿಸಲು ಮೂರು ದಿನಗಳ ರಜೆ ನೀಡಲಾಗುವುದು. ನೀವೆಲ್ಲರೂ ನಾನು ದೊಡ್ಡ ಹುದ್ದೆಗೆ ಅರ್ಹ ಎಂದು ಹೇಳಿದ್ದೀರಿ. ಆದರೆ, ಅದು ನನಗೆ ಮುಖ್ಯವಲ್ಲ, ನೀವೆಲ್ಲರೂ ಬಿಹಾರದಲ್ಲಿ ಮಹಾಘಟಬಂಧನಕ್ಕೆ ಮತ ಹಾಕಿದರೆ ನನಗೆ ಸಂತೋಷವಾಗುತ್ತದೆ. ನಿತೀಶ್ ಕುಮಾರ್ ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದಾರೆ, ತೇಜಸ್ವಿ ಯಾದವ್ ಅವರನ್ನು ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ' ಎಂದು ಹೇಳಿದರು.
'ನೀವಿಲ್ಲದೆ ಬೆಂಗಳೂರಿನಲ್ಲಿ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ನೀವು ಕಠಿಣ ಪರಿಶ್ರಮಿಗಳು ಮತ್ತು ಶ್ರದ್ಧೆಯಿಂದ ಕೆಲಸ ಮಾಡುತ್ತೀರಿ. ಕರ್ನಾಟಕದಲ್ಲಿ ಬಿಹಾರ ಸಂಘಕ್ಕೆ ನಾವು ನಿವೇಶನ ಹಂಚಿಕೆ ಮಾಡಲು ನಿರ್ಧರಿಸಿದ್ದೇವೆ. ನಾವು ನಿಮ್ಮನ್ನು ಹೊರಗಿನವರು ಎಂದು ಎಂದಿಗೂ ತಾರತಮ್ಯ ಮಾಡಿಲ್ಲ. ಕೋವಿಡ್ ಸಮಯದಲ್ಲಿ ಬಸ್ ದರಗಳು ಹೆಚ್ಚಾದಾಗ ನಿಮ್ಮನ್ನು ಮನೆಗೆ ಕಳುಹಿಸಲು ನಾವು ಬಸ್ ವ್ಯವಸ್ಥೆ ಮಾಡಿದ್ದೆವು' ಎಂದು ಅವರು ಹೇಳಿದರು.
ಜೆಡಿಎಸ್ ಕಿಡಿ
ರಾಹುಲ್ ಗಾಂಧಿಯವರ ಮನವೊಲಿಸಲು ಕರ್ನಾಟಕದ ತೆರಿಗೆ ಹಣವನ್ನು ಪರ್ಸೆಂಟೇಜ್ ಲೆಕ್ಕದಲ್ಲಿ ಲೂಟಿ ಹೊಡೆದು ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಹಾರಕ್ಕೆ ಅಕ್ರಮವಾಗಿ ಹಣ ತಲುಪಿಸಿದ್ದಾರೆ. ಈಗ ಕಾಂಗ್ರೆಸ್ ಹೈಕಮಾಂಡ್ ಆಜ್ಞೆ ಮೇರೆಗೆ ಬಿಹಾರದಲ್ಲಿ ಕಾಂಗ್ರೆಸ್ ಪರವಾಗಿ ಮತಚಲಾಯಿಸಲು ಕರ್ನಾಟಕದಲ್ಲಿರುವ ಬಿಹಾರಿಗಳಿಗೆ ವೇತನ ಸಹಿತ 3 ದಿನಗಳ ರಜೆ ಕೊಡಿಸುತ್ತಿದ್ದೀರಿ. ರಾಜ್ಯದ ವಾಣಿಜ್ಯೋದ್ಯಮಿಗಳು, ಬಿಲ್ಡರ್‌ಗಳು ಮತ್ತು ಗುತ್ತಿಗೆದಾರರಿಂದ ಹೆದರಿಸಿ, ಬೆದರಿಸಿ ಕಮಿಷನ್ ವಸೂಲಿ ಮಾಡಿ ಬಿಹಾರ ಚುನಾವಣೆ ಎದುರಿಸಲು ಹೊರಟಿದ್ದೀರಿ ಎಂದು ದೂರಿದೆ.
ಡಿಕೆಶಿ ಅವರೇ ನೀವು ಕರ್ನಾಟಕದ ಜನರ ಪರವಾಗಿ ಕೆಲಸ ಮಾಡುತ್ತಿದ್ದೀರೋ, ಬಿಹಾರಕ್ಕೆ ಮಾಡುತ್ತಿದ್ದೀರೋ ? ಮೊದಲು ನಿಮಗೆ ಮತಹಾಕಿ ಗೆಲ್ಲಿಸಿದ ಕರ್ನಾಟಕದ ಜನರ ಸಂಕಷ್ಟಕ್ಕೆ ಸ್ಪಂದಿಸಿ, ಕನ್ನಡಿಗರನ್ನು ಉಳಿಸಿ ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.
ಬಿಹಾರದ 243 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.