ಬೆಂಗಳೂರು: ರಾಜ್ಯ ಸರ್ಕಾರದ ಬಹುನಿರೀಕ್ಷಿತ ಬೆಂಗಳೂರು ಟೆಕ್ ಸಮಿಟ್ -2025 ನವೆಂಬರ್ 18ರಿಂದ 20ರವರೆಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಐಟಿಬಿಟಿ ಇಲಾಖೆ ‘ಡೀಪ್‌ಟೆಕ್ ದಶಕ’ಕ್ಕೆ ಚಾಲನೆ ನೀಡಿ, 600 ಕೋಟಿ ರೂ. ಹೂಡಿಕೆಯನ್ನು ಘೋಷಿಸಿದೆ.
ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗೋಷ್ಟಿ ನಡೆಸಿದ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ನ.18 ರಿಂದ 20ರ ವರೆಗೆ 28ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್ 2025 ನಡೆಯಲಿದೆ. ಈ ಬಾರಿ ತುಮಕೂರಿನ ರಸ್ತೆ ಬಳಿಯ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಟೆಕ್ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ಫ್ಯೂಚರ್ ಮೇಕರ್ಸ್ ಕಾನ್ ಕ್ಲೇವ್ ನ.20ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ವರ್ಷದ ಶೃಂಗಸಭೆಯ ಪ್ರಮುಖ ಅಂಶವೆಂದರೆ ಸುಮಾರು 10,000 ಉದ್ಯಮಿಗಳು, ಸಂಸ್ಥಾಪಕರು, ಹೂಡಿಕೆದಾರರು ಪಾಲ್ಗೊಳ್ಳಲಿದ್ದಾರೆ. ವೇಗ ವರ್ಧನೆ ಮಾಡುವ ನಿಟ್ಟಿನಲ್ಲಿ ಫ್ಯೂಚರ್ ಮೇಕರ್ಸ್ ಕಾನ್ ಕ್ಲೇವ್ ಮಾಡಲಿದ್ದೇವೆ. ಇದು ನವೋದ್ಯಮಗಳಿಗೆ ದೊಡ್ಡ ವೇದಿಕೆಯಾಗಲಿದೆ. ಫ್ಯೂಚರ್ ಮೇಕರ್ಸ್ ಕಾನ್ ಕ್ಲೇವ್ನಲ್ಲಿ ಹೊಸ ನವೋದ್ಯಮಿಗಳಿಗೆ ಪಾಲ್ಗೊಳ್ಳಲು ಅವಲಾಶ ನೀಡಲಾಗುವುದು ಎಂದು ಹೇಳಿದರು.
ನವೆಂಬರ್ 20 ರಂದು ನಡೆಯಲಿರುವ ಈ ಸಮಾವೇಶದಲ್ಲಿ, AI, DeepTech, DefenseTech, SpaceTech ಮತ್ತು Mobility ಕ್ಷೇತ್ರಗಳಲ್ಲಿ ಅತ್ಯಾಧುನಿಕ ನವೋದ್ಯಮಗಳನ್ನು ಪ್ರದರ್ಶಿಸಲಾಗುವುದು, ಜೊತೆಗೆ ಜಾಗತಿಕ ಉದ್ಯಮ ಮುಖಂಡರು, ಯುನಿಕಾರ್ನ್ ಸಂಸ್ಥಾಪಕರು ಮತ್ತು ಹೂಡಿಕೆದಾರರ ಪ್ರಮುಖ ಅಧಿವೇಶನಗಳನ್ನು ಆಯೋಜಿಸಲಾಗುವುದು.
ರಾಜ್ಯ ಸರ್ಕಾರವು ಡೀಪ್‌ಟೆಕ್ ದಶಕ’ಕ್ಕೆ 600 ಕೋಟಿ ರೂ. ಹೂಡಿಕೆ ಮಾಡಲಿದ್ದು, ಈ ಹೂಡಿಕೆಯು ಕರ್ನಾಟಕವು ಜಾಗತಿಕ ಡೀಪ್‌ಟೆಕ್ ಕೇಂದ್ರವಾಗಿ ಪರಿವರ್ತನೆಗೊಳ್ಳುವುದನ್ನು ವೇಗಗೊಳಿಸುತ್ತದೆ. ಎಐ, ಕ್ವಾಂಟಂ ಕಂಪ್ಯೂಟಿಂಗ್, ಸುಧಾರಿತ ಉತ್ಪಾದಕತೆ ಬಗ್ಗೆ ಚಿಂತನ ಮಂಥನ ನಡೆಯಲಿದೆ. ಈ ಉಪಕ್ರಮದಡಿ ರಾಜ್ಯದಲ್ಲಿ ಡೀಪ್ ಟೆಕ್ ಹಾಗೂ ಎಐ ನವೋದ್ಯಮಗಳಿಗಾಗಿ 1000 ಕೋಟಿ ರೂ. ವರೆಗೆ ಜಂಟಿ ನಿಧಿ ಸೃಜಿಸಲು ಚರ್ಚೆ ನಡೆಸಲಾಗುವುದು.
ನಮ್ಮ ನೀಲನಕ್ಷೆ ಸಿದ್ಧವಾಗಿದೆ. 600 ಕೋಟಿ ರೂ. ಡೀಪ್ ಟೆಕ್ ಹೂಡಿಕೆಯಲ್ಲಿ ಡೀಪ್ ಟೆಕ್ ಎಲಿವೇಟ್ ಕಾರ್ಯಕ್ರಮಕ್ಕೆ 150 ಕೋಟಿ ರೂ. ಸೇರಿದೆ. ಎಲಿವೇಟ್ ಫಾರ್ ಬಿಯಾಂಡ್ ಬೆಂಗಳೂರಿಗೆ 80 ಕೋಟಿ ರೂ. ಫಂಡ್ ಮೀಸಲಿಡುತ್ತಿದ್ದೇವೆ. ಡೀಪ್ ಟೆಕ್ ಮತ್ತು ಎಐ ನವೋದ್ಯಮಗಳಲ್ಲಿ ಇಕ್ವಿಟಿ ಆಧಾರಿತ ಹೂಡಿಕೆಗಾಗಿ ಕ್ಲಸ್ಟರ್ ಫೀಡ್ ಫಂಡ್ 75 ಕೋಟಿ ರೂ. ಮೀಸಲಿಡಲಾಗುತ್ತದೆ. ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡದಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದರ ಜೊತೆಗೆ 48 ಕೋಟಿ ರೂ. ವೆಚ್ಚದಲ್ಲಿ ಐಟಿ ಧಾರವಾಡ, ಐಐಐಟಿ ಧಾರವಾಡ ಮತ್ತು ಕಲಬುಗಿಯಲ್ಲಿ ಇನ್ ಕ್ಯುಬೇಟರ್, ಎಕ್ಸಲೆನ್ಸಿ ಸೆಂಟರ್ ಮಾಡಲಾಗುತ್ತಿದೆ. ಮೈಸೂರು, ಬಾಗಲಕೋಟೆ, ಮಂಗಳೂರು, ಧಾರವಾಡ, ಬೆಳಗಾವಿ, ಹಾಸನ, ತುಮಕೂರು ಸೇರಿ 11 ಕಡೆ ಬಿಸಿನೆಸ್ ಇನ್ ಕ್ಯುಬೇಟರ್ ಆರಂಭಿಸಲಿದ್ದೇವೆ. ಇದಕ್ಕಾಗಿ 110 ಕೋಟಿ ರೂ.ಕೊಡಲಿದ್ದೇವೆ. ಇನ್ನು ಫಂಡ್ ಆಫ್ ಫಂಡ್ ಸೃಜಿಸುವುದು ಅಥವಾ ವಿವಿಗಳ ಜೊತೆ ಸಹ ಹೂಡಿಕೆ ಮಾಡಲು ಚಿಂತನೆ ನಡೆದಿದೆ. ಇದಕ್ಕಾಗಿ 200 ಕೋಟಿ ರೂ. ಮೀಸಲಿಡಲು ಯೋಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಟೆಕ್ ಸಮ್ಮಿಟ್ನಲ್ಲಿ ಸುಮಾರು 500 ಸ್ಪೀಕರ್ಸ್ ಪಾಲ್ಗೊಳ್ಳಲಿದ್ದಾರೆ. ಹಲವು ನಿಯೋಗಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. 60 ದೇಶಗಳಿಂದ ಸುಮಾರು 50,000ಕ್ಕೂ ಅಧಿಕ ಜನರು ಟೆಕ್ ಸಮ್ಮಿಟ್ಗೆ ಭೇಟಿ ನೀಡುವ ನಿರೀಕ್ಷೆ ಇದೆ. 1000ಕ್ಕೂ ಅಧಿಕ ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ.
ಗ್ರಾಮೀಣ ಐಟಿ ಕ್ವಿಜ್, ಬಯೋ ಕ್ವಿಜ್, ಎಕ್ಸಿಬಿಟರ್ ಅವಾರ್ಡ್ ಕಾರ್ಯಕ್ರಮ ಟೆಲ್ ಸಮ್ಮಿಟ್ನಲ್ಲಿ ಇರಲಿದೆ. ಫ್ಯೂಚರ್ ರೈಸ್ ಈ ಬಾರಿಯ ಟೆಲ್ ಸಮ್ಮಿಟ್ ಘೋಷ ವಾಕ್ಯವಾಗಿರಲಿದೆ ಎಂದು ಮಾಹಿತಿ ನೀಡಿದರು.